Advertisement

**ಉರ್ದು ಜಾಹೀರಾತು ವಿವಾದ: ವಿಪಕ್ಷಗಳ ವಿರೋಧ ‘ಆತ್ಮವಂಚನೆ’ – ಸಿದ್ದರಾಮಯ್ಯ

ಬೆಂಗಳೂರು, ಫೆ.26: ಸರ್ಕಾರದ ಜಾಹೀರಾತು ಉರ್ದು ಪತ್ರಿಕೆಯಲ್ಲಿ ಪ್ರಕಟಗೊಂಡ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ನಾಯಕರು ತೋರಿಸಿರುವ ವಿರೋಧವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದಾಗಲೇ ಉರ್ದು ಭಾಷೆಯ ಜಾಹೀರಾತುಗಳನ್ನು ನೀಡಿದವರು ಈಗ ಅದೇ ವಿಷಯದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳುತ್ತಿರುವುದು ಆತ್ಮವಂಚನೆ ಮತ್ತು ಅಸಹ್ಯದ ಪರಮಾವಧಿ ಎಂದು ಅವರು ಹೇಳಿದ್ದಾರೆ.

ಸರ್ಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದಲೇ ಜಾಹೀರಾತುಗಳನ್ನು ನೀಡಲಾಗುತ್ತದೆ. ಹೆಚ್ಚಿನ ಜನರಿಗೆ ತಲುಪುವ ಸಲುವಾಗಿ ಆಯಾ ಭಾಷೆಯ ಪತ್ರಿಕೆಗಳಲ್ಲಿ ಅದೇ ಭಾಷೆಯಲ್ಲಿ ಜಾಹೀರಾತು ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಇದರಿಂದ ಪತ್ರಿಕೆಯ ಓದುಗರಿಗೆ ಜಾಹೀರಾತಿನ ವಿಷಯ ಸುಲಭವಾಗಿ ಅರ್ಥವಾಗಿ, ಜಾಹೀರಾತು ನೀಡಿದ ಉದ್ದೇಶವೂ ಈಡೇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಹಲವು ಬಾರಿ ಉರ್ದು ಭಾಷೆಯ ಜಾಹೀರಾತುಗಳನ್ನು ನೀಡಿದ್ದಾರೆ. ಆಗ ಅದು ತುಷ್ಟೀಕರಣವೆಂದು ಅವರಿಗೆ ಅನ್ನಿಸಲಿಲ್ಲ. ಈಗ ನಮ್ಮ ಸರ್ಕಾರ ನೀಡಿರುವ ಉರ್ದು ಜಾಹೀರಾತು ಕಂಡೊಡನೆ ಅವರೊಳಗಿನ ಕನ್ನಡಪ್ರೇಮ ಏಕಾಏಕಿ ಎದ್ದುನಿಂತಿರುವುದು ‘ಹಿಪೋಕ್ರಸಿ’ಗೆ ಉದಾಹರಣೆ ಎಂದು ಕಟುವಾಗಿ ಟೀಕಿಸಿದ್ದಾರೆ.

ನೆಲ, ಜಲ ಮತ್ತು ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ಪರಿಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತದ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾನು; ಇದಕ್ಕೆ ಇತಿಹಾಸವೇ ಸಾಕ್ಷಿ ಎಂದು ಮುಖ್ಯಮಂತ್ರಿ ಹೇಳಿದರು. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿಯೇ ರಾಜಕೀಯ ಜೀವನ ಆರಂಭಿಸಿದ ನನಗೆ ಕನ್ನಡ ಕೇವಲ ಭಾಷೆಯಲ್ಲ, ಬದುಕು ಎಂದು ಅವರು ಸ್ಪಷ್ಟಪಡಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions