ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಭಾರೀ ಮೊತ್ತ ಹರಿದು ಹೋಗುತ್ತಿದ್ದರೂ, ಅದರ ಪ್ರತಿಫಲವಾಗಿ ರಾಜ್ಯಕ್ಕೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂಬ ಅಸಮಾಧಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ಸುಮಾರು ನಾಲ್ಕೂವರೆ ಲಕ್ಷ ಕೋಟಿ ರೂ. ತೆರಿಗೆ ಕರ್ನಾಟಕದಿಂದ ಕೇಂದ್ರಕ್ಕೆ ಸೇರುತ್ತದೆ. ಆದರೆ, ರಾಜ್ಯಕ್ಕೆ ಮರಳುವುದು ಕೇವಲ ಶೇ 14ರಷ್ಟು ಮಾತ್ರ ಎಂದು ವಿಷಾದ ವ್ಯಕ್ತಪಡಿಸಿದರು. “ಪ್ರತಿ ಒಂದು ರೂಪಾಯಿ ತೆರಿಗೆಗೆ ಕರ್ನಾಟಕಕ್ಕೆ ಕೇವಲ 14 ಪೈಸೆ ಮರಳುತ್ತಿದೆ, ಇದು ದೊಡ್ಡ ಅನ್ಯಾಯ,” ಎಂದು ಅವರು ಹೇಳಿದರು.
ಉತ್ತರ ಪ್ರದೇಶಕ್ಕೆ ಶೇ 17-18ರಷ್ಟು ಸಿಗುವಾಗ, ಕರ್ನಾಟಕಕ್ಕೆ ಕೇವಲ ಶೇ 3.5 ಮಾತ್ರ ಸಿಗುವುದು ಅಸಮಂಜಸವಾಗಿದೆಯೇ? ಎಂದು ಪ್ರಶ್ನಿಸಿದ ಸಿಎಂ, “15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ 17 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಕೆರೆ ಪುನರುಜ್ಜೀವನ, ಪೆರಿಫೆರಲ್ ರಿಂಗ್‌ರೋಡ್, ಅಪ್ಪರ್ ಭದ್ರಾ ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ನೀಡಬೇಕಿದ್ದ ಹಣವನ್ನು ಉದ್ದೇಶಪೂರ್ವಕವಾಗಿ ತಡೆದುಹಾಕಲಾಗಿದೆ,” ಎಂದು ಆರೋಪಿಸಿದರು.
ಅವರು ಅಗತ್ಯ ಬಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು. “ಹಿಂದೆಯೂ ಇದೇ ರೀತಿಯ ಅನ್ಯಾಯ ಸಂಭವಿಸಿದಾಗ ಕೋರ್ಟ್ ಮೂಲಕ ಹಕ್ಕು ಪಡೆದಿದ್ದೇವೆ. ಈ ಬಾರಿಯೂ ಅದೇ ಹಾದಿಯನ್ನು ಅನುಸರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ,” ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions