Advertisement

ಉಡುಪಿ | ಸೆ.22ರಿಂದ ಅ.2ರವರೆಗೆ ಉಡುಪಿ -ಉಚ್ಚಿಲ ದಸರಾ- 2025 ಮಹೋತ್ಸವ

ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ವರ್ಷ 4ನೇ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಉಡುಪಿ -ಉಚ್ಚಿಲ ದಸರಾ- 2025 ಮಹೋತ್ಸವವನ್ನು ಸೆ.22ರಿಂದ ಅ.2ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಗೌರವ ಸಲಹೆಗಾರ ಜಿ.ಶಂಕರ್ ತಿಳಿಸಿದ್ದಾರೆ.

ದೇವಸ್ಥಾನದ ಮೊಗವೀರ ಭವನದಲ್ಲಿ ಬುಧವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಶಾಸ್ತೊಥಕ್ತ ವಾಗಿ ಪೂಜಿಸಲಾಗುವುದು ಎಂದರು. ಸೆ.21ರಂದು ಸಂಜೆ 6.30ಕ್ಕೆ ಪಡುಬಿದ್ರಿಯಿಂದ ಕಾಪು ಸಮುದ್ರ ತೀರದವರೆಗೆ ಮಾಡಲಾಗಿರುವ ವಿದ್ಯುದ್ದೀಪಾಲಂ ಕಾರದ ಉದ್ಘಾಟನೆ ನಡೆಯಲಿದೆ. ಸೆ.22ರಂದು ಬೆಳಗ್ಗೆ 10ಗಂಟೆಗೆ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳ ಪ್ರದರ್ಶನ, ಮರಳು ಕಲಾಕೃತಿ, ಕುಬ್ಜ ಸಹೋದರರ ಕಲಾಕೃತಿ, ಜನಜಾಗೃತಿ ಕಲಾಕೃತಿ, ವಿಶೇಷ ಶಾಲೆಯ ಮಕ್ಕಳ ಕಲಾಕೃತಿ ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆ ನಡೆಯಲಿದೆ.

ಉಡುಪಿ -ಉಚ್ಚಿಲ ದಸರಾವನ್ನು ಸೆ.22ರಂದು ಬೆಳಗ್ಗೆ 10.30ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿರುವರು. ಈ ಬಾರಿ ವಿಶೇಷವಾಗಿ ಸೀರೆ ಮೇಳವನ್ನು ಆಯೋಜನೆ ಮಾಡಲಾಗಿದೆ. ಶ್ರೀಕ್ಷೇತ್ರದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳು ನಡೆಯಲಿವೆ. ಅ.2ರಂದು ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದ್ದು, ಮಧ್ಯಾಹ್ನ 3ಗಂಟೆಗೆ ಶ್ರೀಕ್ಷೇತ್ರದಿಂದ ಸಂಜೆ 4.30ಕ್ಕೆ ಶೋಭಾಯಾತ್ರೆಯು ಹೊರಟು ಎರ್ಮಾಳ್ ತನಕ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗಿ ಅಲ್ಲಿಂದ ತಿರುಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಉಚ್ಚಿಲ- ಮೂಳೂರು, ಕೊಪ್ಪಲಂಗಡಿಯವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ವಿಸರ್ಜನೆ ಮಾಡಲಾಗುವುದು. ಈ ಸಂದರ್ಭದಲ್ಲಿ ಕಾಪು ಬೀಚ್‌ನಲ್ಲಿ ಗಂಗಾರತಿ, ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ ಹಾಗೂ ನವದುರ್ಗೆಯರಿಗೆ, ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಕೂಡ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಸುಮಂಗಲೆಯರಿಂದ ಸಾಮೂಹಿಕ ಮಂಗಳಾ ರತಿ, ಕಾಶಿಯಿಂದ ಆಗಮಿಸುವ ಅರ್ಚಕರಿಂದ ಕಾಶಿಯ ಗಂಗಾ ನದಿಯ ತೀರದಲ್ಲಿ ನಡೆಯುವ ರೀತಿಯಲ್ಲಿ ನವದುರ್ಗೆಯರು, ಶ್ರೀಶಾರದಾಮಾತೆ ಹಾಗೂ ಸಮುದ್ರ ರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ಮೋಹನ್ ಬೆಂಗ್ರೆ, ದೇವಸ್ಥಾನದ ಅಧ್ಯಕ್ಷ ಗಿರಿಧರ್ ಎಸ್.ಸುವರ್ಣ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯ, ಪ್ರಮುಖರಾದ ಶರಣ್ ಮಟ್ಟು, ಸಂಧ್ಯಾದೀಪ ಸುನೀಲ್, ಉಷಾರಾಣಿ, ರತ್ನಾಕರ ಸಾಲ್ಯಾನ್, ಸತೀಶ್ ಕುಂದರ್, ಸುಜಿತ್ ಸಾಲ್ಯಾನ್, ಸತೀಶ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ, ಮನೋಜ್ ಮೊದಲಾದವರು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions