Advertisement

ಉಡುಪಿ | ಮಳೆಯಿಂದ ಹಾಳಾದ ರಸ್ತೆಯ ದುರಸ್ಥಿ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಿ - ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ

ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಹಾಳಾದ ರಸ್ತೆಯ ದುರಸ್ಥಿ ಕಾರ್ಯಗಳನ್ನು ತ್ವರಿತವಾಗಿ ಮಾಡುವುದರೊಂದಿಗೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಹವಾಮಾನ ಇಲಾಖೆಯಿಂದ ಪ್ರತಿದಿನ ನೀಡುವ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ಮೀನುಗಾರಿಕೆಗೆ ತೆರಳುವ ಮೀನುಗಾರರುಗಳಿಗೆ ಒದಗಿಸಬೇಕು. ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೆ ಹೋಗುವಾಗ ಕಡ್ಡಾಯವಾಗಿ ಲೈಫ್ ಜಾಕೆಟ್‌ಗಳನ್ನು ಬಳಸುವಂತೆ ಮನವೊಲಿಸಬೇಕು. ಸಮುದ್ರದಲ್ಲಿ ಪ್ರಕ್ಷಬ್ಧ ವಾತಾವರಣವಿದ್ದಲ್ಲಿ ಮೀನುಗಾರಿಕೆಗೆ ಹೋಗದಂತೆ ಎಚ್ಚರವಹಿಸಬೇಕು ಎಂದರು.

ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಬಂದರಿನ ವಿಸ್ತರಣೆಗೆ ಯೋಜನೆಯನ್ನು ರೂಪಿಸಬೇಕು. ನೂತನ ಹೆಜಮಾಡಿ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದರು.

ಕರಾವಳಿ ಭಾಗಗಳಲ್ಲಿ ಕಡಲಕೊರೆತ ಪ್ರತಿ ವರ್ಷವೂ ಉಂಟಾಗುತ್ತಿದೆ. ಇವುಗಳ ತಡೆಗೆ ಶಾಶ್ವತ ವೈಜ್ಞಾನಿಕ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಬೇಕು. ಮಳೆಯಿಂದ ಭತ್ತದ ಬೆಳೆ ಹಾಗೂ ತೋಟಗಾರಿಕೆ ಹಾನಿಗಳನ್ನು ನಿಖರವಾಗಿ ಗುರುತಿಸಿ, ರೈತರಿಗೆ ಪರಿಹಾರವನ್ನು ಒದಗಿಸಬೇಕು ಎಂದರು. ಈಗಾಗಲೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೈಗೊಂಡಿರುವ ಕಾಲುಸಂಕ ನಿರ್ಮಾಣ ಕಾಮಗಾರಿಗಳನ್ನು ಮಳೆ ಕಡಿಮೆಯಾದ ಕೂಡಲೇ ಪುನರಾರಂಭಿಸಿ, ತ್ವರಿತವಾಗಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸಾರ್ವಜನಿಕರು ನೂತನ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ 9/11 ಎ ದಾಖಲೆಗಳನ್ನು ಪಡೆಯಲು

ಕೆಲವು ನಿಯಮಾವಳಿಗಳಿಂದ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ನಿಯಮಾವಳಿಯಲ್ಲಿ ಕೆಲವೊಂದು ವಿನಾಯಿತಿ ನೀಡಿದ್ದಲ್ಲಿ ಸಮಸ್ಯೆಗಳು ಪರಿಹರಿಸಬಹುದಾಗಿದೆ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕೂಡಲೇ ಕಳುಹಿಸಿ ಎಂದರು. ಜಲಜೀವನ್ ಮಿಷನ್ ಅಡಿಯಲ್ಲಿ ಗ್ರಾಮಪಂಚಾಯತಿ ವ್ಯಾಪ್ತಿಯ ಮನೆಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ 525 ನಳ ಸಂಪರ್ಕ ಕಾಮಗಾರಿಗಳಲ್ಲಿ 487 ಪೂರ್ಣಗೊಳಿಸಲಾಗಿದೆ. ಪ್ರಗತಿಯಲ್ಲಿರುವ 38 ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions