ಉಡುಪಿ: ರಾಜ್ಯ ಸರಕಾರ ಬಹುನಿರೀಕ್ಷಿತ ನಾರಾಯಣಗುರು ಅಭಿವೃದ್ಧಿ ನಿಗಮದ ಮೊದಲ ಅಧ್ಯಕ್ಷರನ್ನಾಗಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ,ಹಿರಿಯ ಕಾಂಗ್ರೆಸ್ ಮುಖಂಡ ಮಂಜುನಾಥ್ ಪೂಜಾರಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಪಕ್ಷನಿಷ್ಠೆಗೆ ಕಾಂಗ್ರೆಸ್ ಹೈಕಮಾಂಡ್ ಮತ್ತು ಸರಕಾರ ಮಣೆ ಹಾಕಿದೆ.
ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಮಂಜುನಾಥ್ ಪೂಜಾರಿ ,ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಕಾರ್ಯಕರ್ತನೊಬ್ಬನಿಗೆ ಈ ಜವಾಬ್ದಾರಿ ನೀಡಿದ್ದು ಸಂತಸ ತಂದಿದೆ.ತಾವು ಯಾವುದೇ ಅರ್ಜಿ ಸಲ್ಲಿಸದೆ ಈ ಅವಕಾಶ ಒದಗಿಬಂದಿದ್ದು ನಿಗಮದ ಕೆಲಸ ಮಾಡಲು ನಾರಾಯಣ ಗುರುಗಳು ಶಕ್ತಿ ನೀಡಬೇಕು ಎಂದು ಹೇಳಿದ್ದಾರೆ.
ನಾನು ಈ ಮೊದಲು ಜಿಲ್ಲಾ ಪಂಚಾಯತ್ ಸದಸ್ಯನಾಗಿ ,ತಾಲೂಕು ಪಂಚಾಯತ್ ಸದಸ್ಯನಾಗಿ ,ಪಂಚಾಯತ್ ಅಧ್ಯಕ್ಷನಾಗಿ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ನಲ್ಲಿ ಜನಸೇವೆ ಮಾಡಿದ ಅನುಭವ ಇದೆ.ಹೆಬ್ರಿ ನಾರಾಯಣಗುರು ಸೇವಾ ಸಂಘದ ಸ್ಥಾಪಕ ಗೌರವಾಧ್ಯಕ್ಷನಾಗಿ 20 ವರ್ಷ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದೇನೆ.
ಆ ಅನುಭವದ ಆಧಾರದಲ್ಲಿ ನಾನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತೇನೆ. ಬಿಲ್ಲವರಲ್ಲಿ ಒಟ್ಟು 26 ಒಳಪಂಗಡಗಳಿದ್ದು ಅವರೆಲ್ಲರ ವಿಶ್ವಾಸ ಪಡೆದು ಕೆಲಸ ಮಾಡುತ್ತೇನೆ.ಜೊತೆಗೆ ನಾರಾಯಣಗುರುಗಳ ಆಶಯದಂತೆ ಎಲ್ಲ ಸಮಾಜವನ್ನು ಒಳಗೊಂಡು ಕೆಲಸ ಮಾಡುತ್ತೇನೆ.ಅದೇ ರೀತಿ ಗುರುಗಳ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ.ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಹೊಸದಾಗಿ ರಚನೆ ಮಾಡಲಾಗಿದೆ. ಆದ್ದರಿಂದ ಪ್ರಾರಂಭದಲ್ಲಿ ಸವಾಲುಗಳು ಇದ್ದೇ ಇದೆ.ಈ ಸವಾಲುಗಳನ್ನು ಎದುರಿಸಲು ಎಲ್ಲ ಸಮಾಜಬಾಂಧವರ ಸಹಕಾರ ಮತ್ತು ಸಲಹೆಯನ್ನು ಯಾಚಿಸುತ್ತೇನೆ.ಉಭಯ ಜಿಲ್ಲೆಗಳ ಎಲ್ಲ ಕಾಂಗ್ರೆಸ್ ಮುಖಂಡರು , ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ , ಮುಖಂಡರಾದ ಬಿ.ಕೆ ಹರಿಪ್ರಸಾದ್ ,ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮುಂತಾದವರ ಒಮ್ಮತದ ನಿರ್ಧಾರದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ನೇಮಕ ಮಾಡಿದ್ದು ಖುಷಿ ತಂದಿದೆ.ಜೊತೆಗೆ ನನ್ನ ಈ ನಿಗಮದ ಅಧ್ಯಕ್ಷ ಸ್ಥಾನದ ಶ್ರೇಯವನ್ನು ಕರಾವಳಿಯ ಮತ್ತು ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತಿದ್ದೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions