Advertisement

ಉಡುಪಿ | ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾನಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ

ಉಡುಪಿ ಜಿಲ್ಲೆಯಲ್ಲಿ ಮುಂಬರುವ ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ, ಸೌಹಾರ್ದಯುತವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶ ಹಬ್ಬದ ಆಚರಣೆಯ ಸಲುವಾಗಿ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾನ ಮಾಡುವುದರಿಂದ ಪರಿಸರಕ್ಕೆ ಮಾರಕವಾಗುವುದನ್ನು ತಪ್ಪಿಸಬಹುದು. ಪಿ.ಓ.ಪಿ ಯಿಂದ ನಿರ್ಮಿಸಿರುವ ಹಾಗೂ ಬಣ್ಣಲೇಪಿತ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ವಿಷಕಾರಿ ರಾಸಾಯನಿಕಗಳು ಜಲಮೂಲಗಳಾದ ಕೆರೆ, ಬಾವಿ, ಹಳ್ಳ ಸೇರಿ ನೀರು ಕಲುಷಿತಗೊಳ್ಳುತ್ತದೆ. ಇದು ಜಲಚರಗಳಿಗೆ ಹಾಗೂ ಮಾನವನಿಗೆ ಅತ್ಯಂತ ಹಾನಿಕರ ಎಂದರು.

ಜಿಲ್ಲೆಯಲ್ಲಿ ಪಿ.ಓ.ಪಿ ಯಿಂದ ಗಣೇಶ ಮೂರ್ತಿಗಳ ತಯಾರಿ ಅಥವಾ ಹೊರ ಜಿಲ್ಲೆಗಳಿಂದ ಪಿ.ಓ.ಪಿ ವಿಗ್ರಹಗಳು ಬರುವ ಸಾಧ್ಯತೆ ಇರುವ ಹಿನ್ನೆಲೆ, ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ, ಪಿ.ಓ.ಪಿ ಗಣೇಶ ಮೂರ್ತಿಗಳು ಬಳಕೆಯಾಗದಂತೆ ಕ್ರಮವಹಿಸಬೇಕು ಎಂದ ಅವರು, ಮಣ್ಣಿನ ಗಣಪತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಪ್ರೋತ್ಸಾಹಿಸಬೇಕೆಂದರು. ಪಿ.ಓ.ಪಿ ಗಣಪತಿ ವಿಗ್ರಹಗಳ ಸಾಗಾಣಿಕೆ, ದಾಸ್ತಾನು ಹಾಗೂ ಮಾರಾಟವನ್ನು ತಡೆಗಟ್ಟಲು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ವಿಗ್ರಹಗಳ ತಯಾರಿಕಾ ಘಟಕ, ಮಾರಾಟ ಸ್ಥಳಗಳಿಗೆ ಅನಿರೀಕ್ಷಿತ ಭೇಟಿಗಳನ್ನು ನೀಡಿ, ತಪಾಸಣೆ ಮಾಡಬೇಕು ಎಂದರು.

ಸಾಂಪ್ರದಾಯಿಕವಾಗಿ ಗಣೇಶ ಮೂರ್ತಿಯ ಪ್ರತಿಷ್ಠಾನ ಮಾಡಿ, ಅವುಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳು ಕೆರೆ, ನದಿಪಾತ್ರಗಳಲ್ಲಿ ಸ್ಥಳಗಳನ್ನು ನಿಗಧಿಪಡಿಸಬೇಕು. ಪೂಜೆಗೆ ಬಳಸಿದ ಹೂವು ಸೇರಿದಂತೆ ಮತ್ತಿತರ ತ್ಯಾಜ್ಯಗಳ ಶೇಖರಣೆಗೆ ಸಂಗ್ರಹಣಾ ಘಟಕಗಳನ್ನು ಅಳವಡಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳಿಗೆ ಪ್ರತಿ ಸಮಿತಿಯವರು ಕಡ್ಡಾಯವಾಗಿ ಪೋಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ವತಿಯಿಂದ ನಿಬಂಧನೆಗೊಳಪಟ್ಟ ಅನುಮತಿಗಳನ್ನು ಪಡೆದ ನಂತರವೇ ಸ್ಥಾಪಿಸಬೇಕು ಎಂದ ಅವರು, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಧ್ವನಿ ವರ್ಧಕಗಳ ಬಳಕೆಗೆ ನಿಷೇಧವಿರುತ್ತದೆ ಎಂದರು. ಗಣೇಶ ಪ್ರತಿಷ್ಠಾನ ಪೆಂಡಾಲ್‌ಗಳಲ್ಲಿ ಸಿ.ಸಿ.ಟಿವಿ ಗಳ ಅಳವಡಿಕೆ, ಬೆಳಕಿನ ವ್ಯವಸ್ಥೆಗಳನ್ನು ಆಯೋಜಕರು ಮಾಡುವುದು ಸೂಕ್ತ ಎಂದ ಅವರು, ಬ್ಯಾನರ್‌ಗಳಲ್ಲಿ ಪ್ರಚೋಧನಾಕಾರಿ ಘೋಷಣೆಗಳನ್ನು ಅಳವಡಿಕೆ ಮಾಡುವಂತಿಲ್ಲ. ಬ್ಯಾನರ್‌ಗಳ ಅಳವಡಿಕೆಗೆ ಸೂಕ್ತ

ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಎಎಸ್‌ಪಿ ಸುಧಾಕರ್ ನಾಯಕ್, ಸಹಾಯಕ ಕಮೀಷನರ್ ರಶ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions