Advertisement

ಇದು ಜಾತಿಗಣತಿಯಲ್ಲ, ಸಾಮಾಜಿಕ ನ್ಯಾಯ ಒದಗಿಸುವ ಸಮೀಕ್ಷೆ: ರಂಭಾಪುರಿ ಶ್ರೀಗಳು ಆತಂಕಪಡುವ ಅಗತ್ಯವಿಲ್ಲ; ಡಿ.ಕೆ.ಶಿವಕುಮಾರ್

ರಾಜ್ಯ ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೇಲೆ ಯಾರಿಗೂ ಸಂಶಯ ಬೇಡ. ಇದು ಕೇವಲ ಜಾತಿಗಳ ಗಣತಿಯಲ್ಲ, ಸಾಮಾಜಿಕ ನ್ಯಾಯ ಒದಗಿಸುವ ಸಮೀಕ್ಷೆ. ಜನರಿಗೆ ನೆರವಾಗುವ ಸಮೀಕ್ಷೆ. ಇದರ ಬಗ್ಗೆ ಎಲ್ಲಾ ಸಮುದಾಯದವರು ಎಚ್ಚೆತ್ತುಕೊಂಡು, ಇದರ ಉಪಯೋಗ ಪಡೆಯಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಭಾನುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಾತಿಗಣತಿ ವಿಚಾರವಾಗಿ ಕ್ರೈಸ್ತ ಜಾತಿಗಳನ್ನು ಹಿಂದುಳಿದ ವರ್ಗಗಳ ಆಯೋಗ ಕೈಬಿಡಲು ನಿರ್ಧರಿಸಿದೆ. "ಕಳೆದ ಸಮೀಕ್ಷೆ ನಡೆಸಿ 10 ವರ್ಷ ಕಳೆದಿರುವ ಕಾರಣ, ಮರುಸಮೀಕ್ಷೆ ಮಾಡಲಾಗುತ್ತಿದೆ. ಈ ಬಾರಿ ಮಾಹಿತಿ ನೀಡಲು ಎಲ್ಲಾ ಸಮಾಜದವರಿಗೂ ಸಂಪೂರ್ಣ ಅವಕಾಶ ನೀಡಿದ್ದೇವೆ. ಎಲ್ಲಾ ಸಮಾಜದವರು ಈ ಸಮೀಕ್ಷೆ ವಿಚಾರದಲ್ಲಿ ಜಾಗೃತರಾಗಿ, ತಪ್ಪದೇ ಭಾಗವಹಿಸಬೇಕು" ಎಂದರು.

"ಕರ್ನಾಟಕದ 7 ಕೋಟಿ ಕನ್ನಡಿಗರು, ಪ್ರಪಂಚದ ಯಾವುದೇ ದೇಶದಲ್ಲಿರುವ ಕನ್ನಡಿಗರು ಆನ್ಲೈನ್ ಮೂಲಕ ತಮ್ಮ ಮಾಹಿತಿ ಸಲ್ಲಿಸಬಹುದು. ಜೊತೆಗೆ ನೀವು ಆಕ್ಷೇಪ ಸಲ್ಲಿಸಲು ಅವಕಾಶ ಕಲ್ಪಿಸಿದ್ದೇವೆ. ನಿಮ್ಮ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯುವ ಅವಕಾಶವಿದೆ. ನೀವು ನಿಮ್ಮ ಕುಟುಂಬದವರ ವಿವರ ಬರೆಸಿ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಾ ಸಮಾಜದವರ ಬಳಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ಹೇಳಿದರು.

"ಎಲ್ಲರಿಗೂ ನ್ಯಾಯ ಒದಗಿಸಿ ಕೊಡಬೇಕು ಎಂದು ನಮ್ಮ ಸರ್ಕಾರ ಈ ತೀರ್ಮಾನ ಮಾಡಿದೆ. ವೀರಶೈವ ಸಮಾಜಕ್ಕೆ ತೊಂದರೆಯಾಗಲಿದೆ ಎಂದು ರಂಭಾಪುರಿ ಶ್ರೀಗಳು ಆತಂಕಪಡುವ ಅಗತ್ಯವಿಲ್ಲ. ನೀವು ನಿಮ್ಮ ಸಮುದಾಯದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ. ಅದೇ ರೀತಿ ಎಲ್ಲರೂ ತಮ್ಮ ತಮ್ಮ ಸಮುದಾಯಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು" ಎಂದು ಕರೆ ನೀಡಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions