ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ಚಾಲ್ತಿಯಲ್ಲಿರುವಾಗ ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮ ಮೂರ್ತಿಯ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎನ್ನುವ ಮನವಿಯನ್ನು ರಾಜಕೀಯ ಪಕ್ಷದ ನಾಯಕರುಗಳ ಸಹಿತ ಇತರೆ ಎಲ್ಲರಿಗೂ ಈ ಪತ್ರಿಕಾ ಹೇಳಿಕೆಯ ಮುಖಾಂತರ ಮನವಿಯನ್ನು ಮಾಡುತ್ತಿದ್ದೇನೆ ಎಂದು ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಯಾವುದೇ ದಾಖಲೆಗಳನ್ನು ಅಥವಾ ಚಾರ್ಜ್ ಶೀಟ್ ಅನ್ನು ಪರಿಶೀಲನೆ ಮಾಡದೇ ಪರಶುರಾಮ ಮೂರ್ತಿಯ ವಿಚಾರದಲ್ಲಿ ಕಾರ್ಕಳ ಬಿಜೆಪಿಗರು ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ. ಇದರ ನಡುವೆ ಮಾನ್ಯ ಉದಯ ಶೆಟ್ಟಿಯವರು ಮಾನ್ಯ ಉಚ್ಛ ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯಿಂದ ಬೆಂಬಲ ಅಥವಾ ಯಾವುದೇ ರೀತಿಯ ವಿರೋಧವೂ ಇಲ್ಲ ಹಾಗೂ ಸಲ್ಲಿಸಿರುವ ಅರ್ಜಿಯ ಸಾಧಕ ಬಾಧಕಗಳಿಗೆ ಸ್ವತಃ ಅವರೇ ಹೊಣೆಯಾಗಿರುತ್ತಾರೆ. ಪ್ರಮುಖವಾಗಿ ಬಿಜೆಪಿಯವರಾಗಲಿ,ಕಾಂಗ್ರೆಸ್ಸಿನವರಾಗಲಿ, ಮಾನ್ಯ ಉದಯ ಶೆಟ್ಟಿಯವರಾಗಲಿ ಅಥವಾ ಇತರೇ ಯಾರೇ ಆಗಲಿ ಥೀಂ ಪಾರ್ಕ್ ವಿಚಾರವನ್ನು ವೈಯಕ್ತಿಕವಾಗಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ವಿನಂತಿಸುತ್ತಿದ್ದೇವೆ.
ಹೈಕೋರ್ಟಿಗೆ ಸಲ್ಲಿಸಿರುವ ರಿಟ್ ಅರ್ಜಿಯ ಕುರಿತಂತೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯೊಂದಿಗೆ ಉದಯ ಶೆಟ್ಟಿಯವರು ಯಾವುದೇ ರೀತಿಯ ಮಾತುಕತೆ ನಡೆಸಿರುವುದಿಲ್ಲ. ಹಾಗಾಗಿ ಆ ಅರ್ಜಿಗೆ ಅವರೇ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ. ಹಾಗಾಗಿ ಇದಕ್ಕೂ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾನೂನು ಹೋರಾಟಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ.
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಿಚಾರವು ಮಾನ್ಯ ನ್ಯಾಯಾಲಯದಲ್ಲಿರುವಾಗ ಬಿಜೆಪಿ ನಾಯಕರುಗಳು ಬೇಕಾಬಿಟ್ಟಿಯಾಗಿ ಹೇಳಿಕೆಗಳನ್ನು ನೀಡುವುದು ಅಥವಾ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಪ್ರತಿಭಟನೆ ಸಂಬಂಧಪಟ್ಟಂತೆ ಎಲ್ಲ ಪತ್ರಿಕಾ ವರದಿಗಳು ಮತ್ತು ಹೇಳಿಕೆಗಳ ದಾಖಲೆಗಳು ನಮ್ಮ ಬಳಿಯಲ್ಲಿ ಇದೆ. ಹಾಗೂ ಮುಂದಿನ ದಿನಗಳಲ್ಲಿ ಅಗತ್ಯತೆಯ ಮೇರೆಗೆ ಈ ಎಲ್ಲವನ್ನು ಮಾನ್ಯ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಲಯದಲ್ಲಿ ಈ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸುತ್ತಿದ್ದೇನೆ.
ನಮ್ಮ ಸಮಿತಿಯು ಪರಶುರಾಮ ಮೂರ್ತಿ ಪುನರ್ ಪ್ರತಿಷ್ಠಾಪನಾ ವಿಚಾರವನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ. ರಾಜಕೀಯವನ್ನು ಹೊರತುಪಡಿಸಿ ಧಾರ್ಮಿಕ ಉದ್ದೇಶಕ್ಕಾಗಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದಯ ಶೆಟ್ಟಿಯವರ ಮೂಲ ನಿಲುವಿನಲ್ಲಿ ಬದಲಾವಣೆಯಾಗಿದ್ದಲ್ಲಿ, ಮಾನ್ಯ ಉಪಮುಖ್ಯಮಂತ್ರಿಗಳ ಹೇಳಿಕೆಯ ಬಗ್ಗೆ ಹಾಗೂ ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವವರೆಗಿನ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕೇ ಹೊರತು ಇದಕ್ಕೆಲ್ಲಾ ಸ್ಪಷ್ಟನೆ ನೀಡುವುದು ನಮ್ಮ ಸಮಿತಿಯ ಜವಾಬ್ದಾರಿಯಾಗಿರುವುದಿಲ್ಲ ಎಂದು ಸಮಿತಿಯ ಪರವಾಗಿ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions