Advertisement

ರಂಗಭೂಮಿ ಯಾವತ್ತಿಗೂ ಪ್ರತಿರೋಧದ ಪ್ರಭಾವಶಾಲಿಮಧ್ಯಮ : ಪ್ರೊ.ಕೃಷ್ಣಮೂರ್ತಿ ಚಿತ್ರಾಪುರ

ಸಾಮಾಜಿಕ ವ್ಯವಸ್ಥೆಯ ಅಸಮಾನತೆಯ ವಿರುದ್ಧದ ಬಂಡಾಯದ ಧ್ವನಿಯಾಗಿ ನಾಟಕ ರಂಗ ಬಹಳ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಆಳುವ ಸರ್ಕಾರದಾರಿತಪ್ಪಿದಾಗ ಪ್ರತಿಭಟನೆಯ ಸ್ವರೂಪವಾಗಿ ರಂಗಭೂಮಿ ಬೀದಿಗೆ ಇಳಿದಿದೆ. ಸರಕಾರದ ವ್ಯವಸ್ಥೆಯ ವಿರುದ್ಧ ನಡೆಯುತ್ತಿದ್ದ ಬೀದಿ ನಾಟಕಗಳು ಇಂದು ಸರಕಾರದ ಸವಲತ್ತು ಪಡೆದು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸರಕಾರದ ಜಾಹಿರಾತಿಗೆ ಬಳಕೆಯಾಗುತ್ತಿರುವುದು ವಿಷಾದನೀಯ ಎಂದು ಸುರತ್ಕಲ್ನ ಗೋವಿಂದ ದಾಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿರುವ ಪ್ರೊ. ಕೃಷ್ಣಮೂರ್ತಿ ಚಿತ್ರಾಪುರ ಹೇಳಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಆಯೋಜನೆಯಲ್ಲಿ ಸಮುದಾಯ ಕುಂದಾಪುರದ ಸಹಭಾಗಿತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಕುಂದಾಪುರದ ಹಂಚು ಕಾರ್ಮಿಕರ ಸಭಾಭವನದಲ್ಲಿ ನಡೆದ ವ “ಚಾರಗೋಷ್ಠಿ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ 'ಕನ್ನಡ ರಂಗಭೂಮಿ ವರ್ತಮಾನದ ತಲ್ಲಣಗಳು" ಎಂಬ ವಿಷಯದಲ್ಲಿ ಮಾತನಾಡುತಿದ್ದರು.

ಕನ್ನಡ ರಂಗಭೂಮಿಯ ಮೇಲೆ ನೀನಾಸಂ ಮತ್ತು ಸಮುದಾಯದ ಜಾಥಾಗಳು ಬೀದಿನಾಟಕಗಳು ಮತ್ತು ಜಾಗತೀಕರಣದ ಪ್ರಭಾವ ಬಹಳ ದಟ್ಟವಾಗಿದೆ. ಜಾಗತೀಕರಣ ನಮ್ಮ ಸ್ವಾಭಿಮಾನದ ಮೇಲೆ ಸವಾರಿ ಮಾಡಿದರೆ ಸಮುದಾಯದ ಜಾಥಾದಿಂದ ಪ್ರಭಾವಿತವಾದ ಕಾರ್ಮಿಕ ರಂಗಚಳವಳಿ ಬಹುತೇಕ ನಿಂತು ಹೋಗಿದೆ. ವರ್ತಮಾನದ ತಲ್ಲಣಗಳಿಗೆ ರಂಗಚಳವಳಿ ಮೂಲಕ ಮುಖಾಮುಖಿಯಾಗುವ ಕೆಲಸವನ್ನು ಕಾರ್ಮಿಕ ಸಂಘಟನೆಗಳು ಮತ್ತೆ ಕೈಗೆತ್ತಿಕೊಳ್ಳಬೇಕು ಎಂದು ಅವರು ಅಭಿಪ್ರಯಪಟ್ಟರು ಮುಂದುವರೆದು ಮಾತನಾಡಿದ ಅವರು ಮಾಧವ ತಿಂಗಳಾಯರು ಜನಮರ್ಲ್' ಎಂಬ ತುಳುವಿನ ಮೊದಲ ಸಾಮಾಜಿಕ ನಾಟಕ ಬರೆದು ಆ ಕಾಲದಲ್ಲಿದ್ದ ಸಾಮಾಜಿಕ ಪಿಡುಗುಗಳ ವಿರುದ್ಧ ಮತ್ತು 'ಜಾಗೃತಿ' ನಾಟಕದ ಮೂಲಕ ಕಾರ್ಮಿಕರ ಶೋಷಣೆಯ ವಿರುದ್ಧ ಧ್ವನಿಯೆತ್ತಿದ್ದರು. ನಿರಂಜನರು 'ನಾವೂ ಮನುಷ್ಯರು' ನಾಟಕದ ಮೂಲಕ ಜನತಾ ರಂಗಚಳುವಳಿಗೆ ಧುಮುಕಿದ್ದರು ಹೀಗ ಕನ್ನಡ ರಂಗಭೂಮಿ ವರ್ತಮಾನದ ತಲ್ಲಣಗಳಿಗೆ ಪ್ರತಿಭೂಮಿಯಾಗಿ ಕೆಲಸಮಾಡಬೇಕಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಭಿಲಾಷಾ ಎಸ್ ಅವರು ಮಾತನಾಡಿ ರಂಗಭೂಮಿ ಎನ್ನುವುದು ಆನಂದ ಮತ್ತು ಅರಿವನ್ನು ವಿಸ್ತರಿಸುತ್ತಾ ನಮ್ಮನ್ನು ಔನತ್ಯಕ್ಕೇರಿಸುತ್ತದೆ ಕಲಾತ್ಮಕತೆ ನಾಟಕದ ಬಹಳ ಮುಖ್ಯ ಆಯಾಮ, ಕಲಾತ್ಮಕತೆ ಇಲ್ಲದ ನಾಟಕ ಪ್ರದರ್ಶನದಲ್ಲಿ ಸೋಲುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನೋರ್ವ ಮುಖ್ಯ ಅತಿಥಿ ಸತ್ಯನಾ ಕೊಡೇರಿಯವರು ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಭಾಗದಲ್ಲಿ ರಂಗಭೂಮಿ ಇನ್ನಷ್ಟು ವಿಸ್ತಾರಗೊಳ್ಳಬೇಕಾದ ಅಗತ್ಯವಿದೆ, ಆ ನೆಲೆಯಲ್ಲಿ ಮಕ್ಕಳ ರಂಗಭೂಮಿಯನ್ನು ಕಟ್ಟುವ ಕೆಲಸವಾಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿಯ ಉಡುಪಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಟಮಾತನಾಡಿ ಕಾರ್ಪೊರೇಟ್ ರಂಗಸಂಸ್ಕೃತಿಯ ಕತ್ತಿಯಲುಗಿನ ಮೇಲೆ ಕನ್ನಡ ರಂಗಭೂಮಿ ಇರುವುದು ಇವತ್ತು ನಿಚ್ಚಳವಾಗಿ ಕಾಣುತ್ತಿದೆ. ನಾವು ಪಡೆಯುವ ದುಡ್ಡಿನ ಮೂಲ ಯಾವ ಬಗೆಯದು ಎಂಬುದು ತಿಳಿಯದೆ ಹವ್ಯಾಸಿ ರಂಗತಂಡಗಳು ಪರದನಕ್ಕೆ ಕೈ ಚಾಚುತ್ತಿವೆ. ಹೊಸನಾಟಕ ರಚನೆ, ಹೊಸ ರಂಗಮಂದಿರಕ್ಕೊಂದು ನೆಲೆ ಸೂರು, ಹಸರಂಗಮಂದಿರದ ನಿರ್ಮಾಣಮುಂತಾದ ಹವ್ಯಾಸಿಗಳ ಈಡೇರದ ದಶಕಗಳ ಕನಸುಗಳೇ ಬಂಡವಾಳಶಾಹಿಗೆ ಆಹಾರವಾಗುತ್ತಿದೆ. ಇಪ್ಪತ್ತು ಮೂವತ್ತು ವರುಷಗಳನ್ನು ಯಾವುದೇ ರಾಜಾಶ್ರಯವಿಲ್ಲದೆ ತನ್ನ ಸುತ್ತಲಿನ ಜನಸಮುದಾಯದಲ್ಲಿನ ಚ ಲ್ಲರೆ ದೇಣಿಗೆಗಳನ್ನೇ ರಂಗಾಶ್ರಯವಾಗಿರಿಸಿ ಗುರುತರ ಹೆಜ್ಜೆಗಳ ಮೂಲಕ ಗುರುತಿಸಿಕೊಂಡ ರಂಗ ತಂಡಗಳೇ ಬೊಗಸೆಯೊಡ್ಡಿ ಕೆಂಪು ಹಾಸು ಹಾಸಿ ಬಂಡವಾಳಶಾಹಿಯನ್ನು ಬರಮಾಡಿಕೊಳ್ಳುತ್ತಿವೆ. ಬಹಳ ಅಪಾಯಕಾರಿಯಾಗಿ ಈಗ ಗೋಚರಿಸದ ಈ ನಡೆ, ಒಂದು ಹವ್ಯಾಸಿ ರಂಗತಂಡದ ಅಸ್ಮಿತೆಯ ಮೇಲಾಗುವ ಆಕ್ರಮಣ ಮತ್ತು ಸ್ವಾಯತ್ತತೆಯ ಶಿಥಿಲೀಕರಣದ ಪ್ರಯತ್ನ ಎಂದು ಅವರು ಅಭಿಪ್ರಾಯಪಟ್ಟರು.

ಸಮುದಾಯ ಕುಂದಾಪುರದ ಚಿನ್ನಾಗಂಗೇರ ಅವರು ವಿಶ್ವ ರಂಗಭೂಮಿ ದಿನದ ಸಂದೇಶ ವಾಚನ ಮಾಡಿದರು. ಸಮುದಾಯದ ಅಧ್ಯಕ್ಷ ಡಾ. ಸದಾನಂದ ಬೈಂದೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ರವಿ, ಎಂ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಶೆಟ್ಟಿ ವಂದಿಸಿದರು. ಸಭಾಕಾರ್ಯಕ್ರಮದ ನಂತರದಲ್ಲಿ ಸದಾನಂದ ಬೈಂದೂರು ನಿರ್ದೇಶನದ ಇದೊಂದು ಯುದ್ಧ ಮುಗಿದ ಮೇಲೆ' ಎಂಬ ಯುದ್ಧ ವಿರೋಧಿ ನಾಟಕ ಪ್ರಸ್ತುತಿಗೊಂಡಿತು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions