Advertisement

ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಮಗುವಿನ ಹಕ್ಕು - ಡಿಸಿ ಸ್ವರೂಪ ಟಿ.ಕೆ

ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕಾಗಿದ್ದು, ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ ಎಂದು ಸ್ವರೂಪ ಟಿ.ಕೆ ಹೇಳಿದರು.

ಅವರು ಇತ್ತೀಚೆಗೆ ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿಯಲ್ಲಿ ತೆಲಂಗಾಣ ಹೈದರಾಬಾದ್ ಮೂಲದ ಕುಟುಂಬಕ್ಕೆ ಮಗುವನ್ನು ದತ್ತು ಆದೇಶ ನೀಡಿ ಮಾತನಾಡುತ್ತಿದ್ದರು.

ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆ 2021ರ ಸೆಕ್ಷನ್ 56 (1) 58 ಮತ್ತು 61 ರ ಅಡಿಯಲ್ಲಿ ಕುಟುಂಬದ ಪ್ರೀತಿ ವಂಚಿತ, ಪೋಷಕರನ್ನು ಕಳೆದುಕೊಂಡ, ಪಾಲನೆ ಪೋಷಣೆ ವಂಚಿತ ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳು ಮಾತ್ರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದು ದತ್ತು ನೀಡಲು ಅರ್ಹರಾಗಿರುತ್ತಾರೆ ಎಂದರು.

ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ಮೂಲಕ ದತ್ತು ಪಡೆಯಬಹುದು. ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಎಸೆಯದೇ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬಹುದಾಗಿದೆ. ಜಿಲ್ಲೆಯಲ್ಲಿ ಸಂತೆಕಟ್ಟೆಯ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ, ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆ ಹಾಗೂ ನಿಟ್ಟೂರು ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ ಎಂದರು.

ಕಾನೂನು ಉಲ್ಲಂಘಿಸಿ ಅಥವಾ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಆಸ್ಪತ್ರೆ ಸಿಬ್ಬಂದಿಯವರು ಶಾಮೀಲಾಗಿದ್ದಲ್ಲಿ 1 ಲಕ್ಷ ರೂಪಾಯಿ ದಂಡ ಹಾಗೂ 7 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡುಕೊಂಡವರಿಗೆ 1 ಲಕ್ಷ ದಂಡ ಹಾಗೂ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ, ರಕ್ಷಣಾಧಿಕಾರಿ ಸುರಕ್ಷಾ, ಡಾಟಾ ಅನಾಲಿಸ್ಟ್ ಕ್ಲೀಟಾ, ಉಡುಪಿ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರದ ಸಂಯೋಜಕಿ ಮೆರಿನಾ ಎಲಿಜಬೆತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ದತ್ತು ಪ್ರಕ್ರಿಯೆ ಕುರಿತು ಹಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಛೇರಿ ದೂರವಾಣಿ ಸಂಖ್ಯೆ: 0820-2574964 ಮತ್ತು ಸಂತೆಕಟ್ಟೆ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ ಮೊಬೈಲ್ ಸಂಖ್ಯೆ: 9880442640 ಯಿಂದ ಮಾಹಿತಿ ಪಡೆಯಬಹುದಾಗಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions