Advertisement

‘ಮನ್‌ರೇಗಾ ಉಳಿಸಿ’ ಅಭಿಯಾನ – ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ಪ್ರಜಾಪ್ರಭುತ್ವದಲ್ಲಿ ಜನರು ಸ್ವಾವಲಂಬನೆಯ ಬದುಕು ಸಾಗಿಸುವ ಉದ್ದೇಶದಿಂದ ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್‌ರೇಗಾ)ಯನ್ನು ಜಾರಿಗೆ ತಂದಿತ್ತು. ಹಳ್ಳಿಗಾಡಿನ ಜನರಿಗೆ ನಿಗದಿತ ಆದಾಯವನ್ನು ಖಾತರಿಪಡಿಸಿ, ಗ್ರಾಮೀಣ ಸ್ವಾವಲಂಬನೆಯನ್ನು ಉತ್ತೇಜಿಸುವ ಮಹತ್ವದ ಆಶಯದೊಂದಿಗೆ ಈ ಯೋಜನೆಗೆ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗ್ರಾಮ ಸ್ವರಾಜ್ಯದ ತತ್ವದ ಪ್ರತಿಪಾದಕ ಮಹಾತ್ಮ ಗಾಂಧೀಜಿಯವರ ಹೆಸರನ್ನು ನಾಮಕರಣ ಮಾಡಲಾಗಿತ್ತು.

ಆದರೆ ಇದೀಗ ಕೇಂದ್ರ ಸರ್ಕಾರವು ಜನಸಾಮಾನ್ಯರ ಬದುಕಿಗೆ ಆಸರೆಯಾಗಿರುವ ಹಾಗೂ ಕರೋನಾದಂತಹ ಸಂಕಷ್ಟದ ಸಮಯದಲ್ಲಿ ಲಕ್ಷಾಂತರ ಕುಟುಂಬಗಳ ಅನ್ನದ ಮಾರ್ಗವಾಗಿದ್ದ ಮನ್‌ರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಯೋಜನೆಯ ಹೆಸರನ್ನು ಬದಲಾಯಿಸುವ ನೆಪದಲ್ಲಿ ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೊರಿಸಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.

ಮನ್‌ರೇಗಾ ಯೋಜನೆ ದೇಶದ ಆರ್ಥಿಕ ವ್ಯವಸ್ಥೆಗೆ ಟಾನಿಕ್‌ನಂತೆ ಕಾರ್ಯನಿರ್ವಹಿಸುತ್ತಿದ್ದರೂ, ಅದರ ರೆಕ್ಕೆ-ಪುಕ್ಕಗಳನ್ನು ಕತ್ತರಿಸುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ನಿಲುವು ತಳೆದಿದೆ. ರಾಜೀವ್ ಗಾಂಧಿಯವರ ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮ ಪಂಚಾಯತಿಗಳಿಗೆ ಇದ್ದ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಜನವಿರೋಧಿ ಕಾರ್ಯಗಳಿಗೆ “ರಾಮನ ಯೋಜನೆ” ಎಂಬ ಹೆಸರನ್ನು ನೀಡಲಾಗಿದೆ ಎಂದು ಟೀಕಿಸಿದರು.

ಈವರೆಗೆ ಮನ್‌ರೇಗಾ ಯೋಜನೆಯ ಸಂಪೂರ್ಣ ಕೂಲಿ ಪಾವತಿಯ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದ್ದು, ರಾಜ್ಯ ಸರ್ಕಾರವು ಕೇವಲ ಸಾಮಗ್ರಿಗಳ ವೆಚ್ಚದಲ್ಲಿ 25 ಶೇಕಡಾ ಮಾತ್ರ ಭರಿಸುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ಕರ್ನಾಟಕದಂತಹ ರಾಜ್ಯಗಳಿಗೆ ಕೇವಲ 60 ಶೇಕಡಾ ಅನುದಾನ ನೀಡಿ, ಉಳಿದ 40 ಶೇಕಡಾ ವೆಚ್ಚವನ್ನು ರಾಜ್ಯಗಳೇ ಭರಿಸಬೇಕು ಎಂಬ ತೀರ್ಮಾನ ಕೈಗೊಂಡಿರುವುದು ರಾಜ್ಯಗಳ ಮೇಲೆ ಭಾರೀ ಆರ್ಥಿಕ ಹೊರೆ ಹಾಕಿದಂತಾಗಿದೆ ಎಂದು ಹೇಳಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಂದ ಭಾರೀ ತೆರಿಗೆ ಸಂಗ್ರಹಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರವು ಮತ್ತೆ ಮತ್ತೆ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೊರಿಸುವ ಕೆಲಸ ಮಾಡುತ್ತಿದೆ. ಮನ್‌ರೇಗಾ ಯೋಜನೆಯ ಮೂಲ ಸ್ವರೂಪವನ್ನು ಬದಲಿಸದೇ, ಮಹಾತ್ಮ ಗಾಂಧೀಜಿಯವರ ಹೆಸರನ್ನು ಮರುನಾಮಕರಣ ಮಾಡುವ ಮೂಲಕ ತಮ್ಮ ಜನವಿರೋಧಿ ಹಾಗೂ ದೇಶವಿರೋಧಿ ನಡವಳಿಕೆಗೆ ಕಡಿವಾಣ ಹಾಕಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions