ಕಾರ್ಕಳ: ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅವಶ್ಯಕತೆಯಾಗಿದ್ದು, ಅದು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ಬೆಳೆಸುವಂತಿರಬೇಕು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಿಸಾನ್ ಸಭಾ ಟ್ರಸ್ಟ್‌ನ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದ ಮೂಲ ಉದ್ದೇಶ ಸಮಾನ ಅವಕಾಶಗಳನ್ನು ಒದಗಿಸುವುದಾಗಿದ್ದು, ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ಶಿಕ್ಷಣವೇ ಪರಿವರ್ತನೆಯ ಸಾಧನವಾಗುತ್ತದೆ ಎಂದು ಹೇಳಿದರು.
ತಾವು ಕುಟುಂಬದ ಮೊದಲ ಪದವೀಧರರಾಗಿದ್ದು ಕಷ್ಟದ ಜೀವನವನ್ನು ಅನುಭವಿಸಿದ್ದಾಗಿ ತಿಳಿಸಿದ ಅವರು, ವೀರಪ್ಪ ಮೊಯ್ಲಿಯವರ ಜೀವನಪಥವನ್ನು ಸ್ಮರಿಸಿದರು. ಬಡವರ ಪರವಾಗಿ ನಿಂತು, ವಕೀಲ ವೃತ್ತಿಯಲ್ಲಿ ಉಚಿತವಾಗಿ ವಕಾಲತ್ತು ಮಾಡುತ್ತ ಪ್ರಾಮಾಣಿಕತೆ ಮೆರೆದ ಅವರ ಸಮಾಜಸೇವೆಯನ್ನು ಪ್ರಶಂಸಿಸಿದರು. ಅವರು ದೀರ್ಘಾಯುಷಿಗಳಾಗಿ ಸಮಾಜಸೇವೆ ಮುಂದುವರಿಸಲಿ ಎಂದು ಹಾರೈಸಿದರು.
ಕಾರ್ಕಳದಲ್ಲಿ ಕಿಸಾನ್ ಸಭಾ ಆರಂಭಿಸಿ ನಂತರ ಪ್ರೌಢಶಾಲೆಯನ್ನು ಸ್ಥಾಪಿಸಿ ನಿರ್ಗತಿಕ ಹಾಗೂ ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. 35 ವರ್ಷಗಳನ್ನು ಪೂರೈಸಿರುವ ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ವಿದ್ಯಾರ್ಥಿಗಳು ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಲಿ ಎಂದು ಆಶಿಸಿದರು.
ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಶಿಕ್ಷಣದ ಉದ್ದೇಶವಾಗಬೇಕು ಎಂದು ತಿಳಿಸಿದ ಅವರು, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶವನ್ನು ಉಲ್ಲೇಖಿಸಿದರು.
ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ, 2013ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನೀಡಿದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರಲ್ಲಿ ಪುನಃ ಅಧಿಕಾರಕ್ಕೆ ಬಂದು ನೀಡಿದ 590 ಭರವಸೆಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದ್ದು, ಎಲ್ಲ ಜಾತಿ ಧರ್ಮಗಳ ಬಡವರಿಗೆ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದುವರೆಗೆ ಗ್ಯಾರಂಟಿಗಳಿಗೆ 1.20 ಲಕ್ಷ ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಹೇಳಿದರು. ದೇಶದ ಸಂಪತ್ತಿನ ಸಮಾನ ಹಂಚಿಕೆಗೆ ಸರ್ಕಾರದ ಪ್ರಯತ್ನ ನಿರಂತರವಾಗಿರುತ್ತದೆ ಎಂದರು.
ಇದೇ ವೇಳೆ 2027ರಲ್ಲಿ ಕಾರ್ಕಳದಲ್ಲಿ ನಡೆಯುವ ಐತಿಹಾಸಿಕ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions