Advertisement

ಮಾನವತೆಗೆ ಜೀವಂತ ಮಾದರಿ ಪ್ರವಾದಿ ಮುಹಮ್ಮದ್‌: ಜ. ಮುಹಮ್ಮದ್ ಕುಂಞಿ

ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ನಗರ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೀರತ್ ಅಭಿಯಾನದ ಸಮಾರೋಪ ಸಮಾರಂಭದ ಅಂಗವಾಗಿ ‘ಮಾನವತೆಗೆ ಜೀವಂತ ಮಾದರಿ ಪ್ರವಾದಿ ಮುಹಮ್ಮದ್‌ (ಸ)’ ಎಂಬ ಶೀರ್ಷಿಕೆಯಡಿ ವಿಚಾರ ಸಂಕಿರಣವನ್ನು ಉಡುಪಿ ಡಾನ್‌ ಬಾಸ್ಕೋ ಚರ್ಚ್‌ ಹಾಲ್‌ನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜ. ಮುಹಮ್ಮದ್ ಕುಂಞಿ, ಪ್ರವಾದಿ ಮುಹಮ್ಮದ್‌ (ಸ) ಅವರನ್ನು ಇತಿಹಾಸದಲ್ಲಿ ಮಾನವತೆಯ ಮಹಾ ನಾಯಕ ಎಂದು ಗುರುತಿಸಲಾಗುತ್ತದೆ. ಆರನೇ ಶತಮಾನದಲ್ಲಿ ಸಣ್ಣಪುಟ್ಟ ಕಾರಣಗಳಿಗೂ ವರ್ಷಗಟ್ಟಲೆ ಯುದ್ಧಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರವಾದಿಯವರ ಸಂದೇಶಗಳು ಜನರಲ್ಲಿ ಸಹೋದರತ್ವ, ಪ್ರೀತಿ, ಕರುಣೆ ಮತ್ತು ಮಾನವೀಯತೆಯ ಭಾವನೆಗಳನ್ನು ಬೆಳೆಸಿದವು ಎಂದು ಹೇಳಿದರು.

ಜನರನ್ನು ಪರಸ್ಪರ ವಿಭಜಿಸುತ್ತಿದ್ದ ಅಂಶಗಳ ನಡುವೆ ದೇವರ ಸಂದೇಶಗಳು ಮನುಷ್ಯರನ್ನು ಸಹೋದರರನ್ನಾಗಿ ಮಾಡುವ ಕೆಲಸ ಮಾಡಿದ್ದವು. ಆದರೆ ಇಂದಿಗೂ ಧರ್ಮ, ಜಾತಿ ಸೇರಿದಂತೆ ವಿವಿಧ ಕಾರಣಗಳಿಂದ ಸಮಾಜದಲ್ಲಿ ಜನರ ನಡುವೆ ಅಂತರ ಮತ್ತು ವಿಭಜನೆ ಉಂಟಾಗುತ್ತಿರುವುದು ವಿಷಾದನೀಯ ಎಂದರು.

ಜನರನ್ನು ವಿಭಜಿಸುವುದು ಧರ್ಮದ ಕೆಲಸವಲ್ಲ. ಮನುಷ್ಯರ ಮನಸ್ಸುಗಳನ್ನು ಒಡೆಯುವುದು ಯಾವುದೇ ಧರ್ಮದ ಬೋಧನೆಯಲ್ಲ. ಎಲ್ಲ ಧರ್ಮಗಳೂ ಪ್ರೀತಿ, ಕರುಣೆ, ನ್ಯಾಯ, ಸತ್ಯ ಮತ್ತು ಮಾನವೀಯತೆಯಂತಹ ಮೌಲ್ಯಗಳಿಗೆ ಮಹತ್ವ ನೀಡುತ್ತವೆ. ಆದ್ದರಿಂದ ಧರ್ಮದ ಹೆಸರಿನಲ್ಲಿ ಅಂತರ ಸೃಷ್ಟಿಸುವ ಬದಲು, ಧರ್ಮಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಂಡು ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಧಾರ್ಮಿಕ ಸಾಮರಸ್ಯ, ಮಾನವೀಯತೆ ಮತ್ತು ಸಹಬಾಳ್ವೆಯ ಅಗತ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾದಿ ಮುಹಮ್ಮದ್‌ (ಸ) ಅವರ ಜೀವನ ಮತ್ತು ಸಂದೇಶಗಳನ್ನು ಸಮಾಜದ ವಿವಿಧ ವರ್ಗಗಳ ಜನರಿಗೆ ಪರಿಚಯಿಸುವ ಉದ್ದೇಶದಿಂದ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರವಾದಿ ಮುಹಮ್ಮದ್‌ (ಸ) ಅವರ ಜೀವನವು ಕೇವಲ ಮುಸ್ಲಿಮರಿಗೆ ಸೀಮಿತವಾಗಿರದೆ, ಸಮಸ್ತ ಮಾನವ ಸಮಾಜಕ್ಕೆ ಹಲವು ಮೌಲ್ಯಗಳನ್ನು ನೀಡುವಂತಹದ್ದು. ಪ್ರೀತಿ, ಕರುಣೆ, ನ್ಯಾಯ, ಸತ್ಯ, ಕ್ಷಮೆ, ನೆರೆಹೊರೆಯವರ ಹಕ್ಕುಗಳ ಗೌರವ, ದುರ್ಬಲರು ಮತ್ತು ಬಡವರ ಬಗ್ಗೆ ಕಾಳಜಿ ಹಾಗೂ ಪ್ರತಿಯೊಬ್ಬರ ಮಾನವ ಘನತೆಯನ್ನು ಗೌರವಿಸುವಂತಹ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಅಗತ್ಯವಾಗಿವೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಉಡುಪಿಯ ಶೋಕಮಾತಾ ಇಗರ್ಜಿಯ ಧರ್ಮಗುರು ರೆ. ಫಾ. ಡೆನಿಸ್ ಡೆಸಾ, ರಾಜಕಾರಣಿಗಳು ಮಕ್ಕಳ ಮನಸ್ಸಿನಲ್ಲೂ ದ್ವೇಷದ ಬೀಜ ಬಿತ್ತಿದ್ದಾರೆ. ಹಿಂದೆ ಒಂದೇ ಬೆಂಚಿನಲ್ಲಿ ವಿವಿಧ ಧರ್ಮಗಳ ಮಕ್ಕಳು ಯಾವುದೇ ಭೇದಭಾವವಿಲ್ಲದೆ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಆದರೆ ಇಂದು ಮಕ್ಕಳ ಮನಸ್ಸಿನಲ್ಲೇ ದ್ವೇಷ ತುಂಬುವಂತಹ ವಾತಾವರಣ ನಿರ್ಮಾಣವಾಗಿರುವುದು ಆತಂಕಕಾರಿ. ಮಕ್ಕಳು ಮುಂದೆ ದೊಡ್ಡವರಾದಾಗ ಸಮಾಜದ ಸ್ಥಿತಿ ಹೇಗಿರಬಹುದು ಎಂಬುದನ್ನು ನಾವು ಯೋಚಿಸಬೇಕಾಗಿದೆ ಎಂದು ಹೇಳಿದರು.

ವಿವಿಧ ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಅರ್ಥೈಸಿಕೊಳ್ಳುವಿಕೆ ಸಮಾಜದ ಶಾಂತಿಗೆ ಪ್ರಮುಖ ಆಧಾರವಾಗಿದೆ. ಧರ್ಮದ ಮೂಲ ಆಶಯಗಳು ಮನುಷ್ಯನಲ್ಲಿ ಉತ್ತಮ ಗುಣಗಳನ್ನು ಬೆಳೆಸುವುದಾಗಿದೆ. ಈ ಹಿನ್ನೆಲೆಯಲ್ಲಿ ಪರಸ್ಪರ ಸಂವಾದ ಮತ್ತು ಸೌಹಾರ್ದಯುತ ಸಂಬಂಧಗಳಿಗೆ ಇಂತಹ ಕಾರ್ಯಕ್ರಮಗಳು ವೇದಿಕೆಯಾಗಬೇಕು ಎಂದರು.

ಸಾಹಿತಿ, ರಂಗಕರ್ಮಿ ಹಾಗೂ ನಿರ್ದೇಶಕ ಯೋಗೇಶ್ ಮಾಸ್ಟರ್ ಮಾತನಾಡಿ, ಎಲ್ಲಾ ಧರ್ಮಗಳೂ ಒಳಿತನ್ನು ಮಾಡಬೇಕು ಎಂಬುದನ್ನೇ ಸಾರುತ್ತವೆ. ‘ನಮ್ಮ ಧರ್ಮವೇ ಶ್ರೇಷ್ಠ’ ಎಂಬ ಭಾವನೆ ಧಾರ್ಮಿಕತೆಯಲ್ಲ, ಅದು ಅಹಂಕಾರ. ವ್ಯಕ್ತಿಯ ಅಹಂಕಾರಕ್ಕೆ ಧರ್ಮದ ಲಾಂಛನವನ್ನು ಅಂಟಿಸುವುದು ಸರಿಯಲ್ಲ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಗೌರವಿಸುತ್ತಾ, ಇತರರ ಧರ್ಮಕ್ಕೂ ಗೌರವ ನೀಡುವ ಮೂಲಕ ಸೌಹಾರ್ದದಿಂದ ಬದುಕಬೇಕು ಎಂದು ಹೇಳಿದರು.

ಶಿಕ್ಷಕಿ ಹೆಲೆನ್ ಶಾಲೆಟ್ ಲುವಿಸ್ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ನಗರ ಅಧ್ಯಕ್ಷ ನಿಸಾರ್ ಅಹಮದ್ ಪ್ರಸ್ತಾವಿಕ ನುಡಿಗಳನ್ನಾಡಿ, ಸೀರತ್ ಅಭಿಯಾನದ ಉದ್ದೇಶ, ಪ್ರವಾದಿ ಮುಹಮ್ಮದ್‌ (ಸ) ಅವರ ಜೀವನದ ವಿವಿಧ ಆಯಾಮಗಳು ಮತ್ತು ಅವರ ಸಂದೇಶಗಳ ಸಾಮಾಜಿಕ ಪ್ರಸ್ತುತತೆಯ ಕುರಿತು ವಿವರಿಸಿದರು.

ಮೌಲಾನ ದಾನಿಷ್ ಕುರ್‌ಆನ್ ಪಠಣ ನೆರವೇರಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ಶಾನವಾಝ್ ಅತಿಥಿಗಳನ್ನು ಸ್ವಾಗತಿಸಿದರು. ಸೀರತ್ ಅಭಿಯಾನ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಮುಶೀರ್ ಅಹಮದ್ ಶೇಖ್, ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರ್ಫರಾಜ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು. ಫೈಝ್ ಅಹಮದ್ ಧನ್ಯವಾದ ಅರ್ಪಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions