Advertisement

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಅಳವಡಿಕೆಗೆ ಪ್ರೊಫೆಸರ್ ಸುಖದೇವ್ ಥೋರಟ್ ಸಮಿತಿ ಶಿಫಾರಸ್ಸು

ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿ ಸಲ್ಲಿಕೆಯಾಗಿದೆ. ಪ್ರೊ.ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯೋಗ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯಗೆ ವರದಿಯನ್ನು ಸಲ್ಲಿಸಿದೆ. ರಾಜ್ಯದ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸಲು ಪ್ರೊಫೆಸರ್ ಸುಖದೇವ್ ಥೋರಟ್ ನೇತೃತ್ವದ ಶಿಕ್ಷಣ ನೀತಿ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ದ್ವಿಭಾಷಾ ನೀತಿ ಅಂದರೇ, ಮಾತೃಭಾಷೆ ಅಥವಾ ಕನ್ನಡ ಭಾಷೆ ಹಾಗೂ ಇಂಗ್ಲೀಷ್ ಭಾಷೆಯ ನೀತಿಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೇ, ಕರ್ನಾಟಕದಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸುವ ಶಿಫಾರಸ್ಸು ಮಾಡಿಲ್ಲ. ಹೀಗಾಗಿ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ದ್ವಿಭಾಷಾ ನೀತಿಯು ಕರ್ನಾಟಕದಲ್ಲಿ ಕನ್ನಡ ಅಥವಾ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನೀಡುತ್ತೆ. ಇದರಿಂದಾಗಿ ಕರ್ನಾಟಕದಲ್ಲಿರುವ ಅನ್ಯ ರಾಜ್ಯದ ಉದ್ಯೋಗಿಗಳು, ಪೋಷಕರು ತಮ್ಮ ಮಕ್ಕಳಿಗೆ ಅವರ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ಇಂಗ್ಲೀಷ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಅನ್ಯ ರಾಜ್ಯದ ಪೋಷಕರು ಕರ್ನಾಟಕದಲ್ಲಿ ವಾಸ ಇದ್ದರೂ, ಕರ್ನಾಟಕದ ನೆಲದ ಭಾಷೆಯಾದ ಕನ್ನಡವನ್ನೇ ಕಲಿಸದೇ ಇರಬಹುದು.

ಇದರಿಂದ ಕರ್ನಾಟಕದಲ್ಲಿ ಶಾಲಾ ಹಂತದಲ್ಲೇ ಮಕ್ಕಳು ಕನ್ನಡ ಭಾಷೆ ಕಲಿಯದೇ ತಮ್ಮ ಮಾತೃಭಾಷೆಯನ್ನು ಕಲಿಯುತ್ತಾರೆ. ಉದಾಹರಣೆಗೆ ಉತ್ತರ ಪ್ರದೇಶದಿಂದ ಬಂದ ವಿದ್ಯಾರ್ಥಿ ತನ್ನ ಮಾತೃಭಾಷೆ ಹಿಂದಿ ಎಂದು ಹೇಳಿ ಹಿಂದಿ ಭಾಷೆ ಆಯ್ಕೆ ಮಾಡಿಕೊಳ್ಳುತ್ತಾರೆ. ಎರಡನೇ ಭಾಷೆಯಾಗಿ ಇಂಗ್ಲೀಷ್ ಕಲಿಯುತ್ತಾರೆ. ತಮಿಳುನಾಡಿನಿಂದ ಬಂದ ವಿದ್ಯಾರ್ಥಿ, ತನ್ನ ಮಾತೃಭಾಷೆ ತಮಿಳು ಎಂದು ತಮಿಳು ಅನ್ನು ಮಾತೃಭಾಷೆಯಾಗಿ ಆಯ್ಕೆ ಮಾಡಿಕೊಂಡು ಎರಡನೇ ಭಾಷೆಯಾಗಿ ಇಂಗ್ಲೀಷ್ ಕಲಿಯುತ್ತಾರೆ. ಇನ್ನೂ ಆಂಧ್ರದಿಂದ ಬಂದ ವಿದ್ಯಾರ್ಥಿ ತನ್ನ ಮಾತೃಭಾಷೆ ತೆಲುಗು ಎಂದು ಮಾತೃಭಾಷೆಯಾಗಿ ತೆಲುಗು ಹಾಗೂ ಎರಡನೇ ಭಾಷೆಯಾಗಿ ಇಂಗ್ಲೀಷ್ ಕಲಿಯುತ್ತಾರೆ. ಇದರಿಂದಾಗಿ ಕರ್ನಾಟಕ ನೆಲದಲ್ಲಿ ವಾಸ ಮಾಡುತ್ತಾ, ವಿದ್ಯಾಭ್ಯಾಸ ಮಾಡುವವರು ಕೂಡ ಕನ್ನಡ ಭಾಷೆ ಕಲಿಯದಂತೆ ಆಗುತ್ತೆ.

ತ್ರಿಭಾಷೆಗೂ ಅವಕಾಶ

ಕರ್ನಾಟಕದಲ್ಲಿ ತ್ರಿಭಾಷೆಗೂ ಅವಕಾಶ ನೀಡುವ ಶಿಫಾರಸ್ಸು ಅನ್ನು ಪ್ರೊಫೆಸರ್ ಸುಖದೇವ್ ಥೋರಟ್ ಅವರ ಸಮಿತಿಯು ಮಾಡಿದೆ. ರಾಜ್ಯದ ಮಾನ್ಯತೆ ಪಡೆದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯುವುದು ಕಡ್ಡಾಯವಿದೆ. ಹೀಗಾಗಿ ಕನ್ನಡ ಮತ್ತು ಇಂಗ್ಲೀಷ್ ಜೊತೆಗೆ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹಾಲಿ ಇರುವ ತ್ರಿಭಾಷಾ ಸೂತ್ರಕ್ಕೂ ರಾಜ್ಯದ ನೂತನ ಶಿಕ್ಷಣ ನೀತಿ ಅವಕಾಶ ಕೊಟ್ಟಂತೆ ಆಗಿದೆ.

ಸಮಿತಿಯ ಶಿಫಾರಸ್ಸುಗಳೇನು?

ರಾಜ್ಯದಲ್ಲಿ 2+8+4 ರಚನೆಯ ಅಳವಡಿಕೆಗೆ ಶಿಫಾರಸ್ಸು ಮಾಡಲಾಗಿದೆ. ಅಂದರೇ, 2 ವರ್ಷ ಪೂರ್ವ ಪ್ರಾಥಮಿಕ ಶಿಕ್ಷಣ, ಬಳಿಕ 8 ವರ್ಷ ಪ್ರಾಥಮಿಕ ಶಿಕ್ಷಣ, ಬಳಿಕ 4 ವರ್ಷ ಮಾಧ್ಯಮಿಕ ಶಿಕ್ಷಣವನ್ನು ನೀಡುವಂತೆ ಶಿಫಾರಸ್ಸು ಮಾಡಲಾಗಿದೆ.

ಒಂದು ಕಡೆಯಿಂದ ಇನ್ನೊಂದು ಕಡೆ ವಲಸೆ ಹೋಗುವ ಪೋಷಕರ ಮಕ್ಕಳಿಗಾಗಿ ವಲಸೆ ಶಾಲೆ ಸ್ಥಾಪನೆಗೆ ಶಿಫಾರಸ್ಸು ಮಾಡಲಾಗಿದೆ.

ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.

ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೂ ಕನ್ನಡ ಅಥವಾ ಮಾತೃಭಾಷೆ ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.

2 ವರ್ಷಗಳ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾಥಮಿಕ ಶಾಲೆಗಳಲ್ಲೇ ನೀಡಬೇಕು.

ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯಗಳಿಗೆ ಸಮಾನವಾಗಿ ಹೆಚ್ಚಿಸಬೇಕು.

ಶಾಲಾ ಶಿಕ್ಷಣದ ಖಾಸಗೀಕರಣವನ್ನು ತಡೆಗಟ್ಟಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ಶಿಕ್ಷಣಕ್ಕಾಗಿ ಜಿಎಸ್‌ಡಿಪಿಯ ಶೇ.4 ರಷ್ಟು ಮತ್ತು 2034-35 ರ ವೇಳೆಗೆ ಉನ್ನತ ಶಿಕ್ಷಣಕ್ಕಾಗಿ ಶೇ.1 ರಷ್ಟು ವೆಚ್ಚ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.

ಇನ್ನೂ ಎನ್‌ಇಪಿ ಯಲ್ಲಿ 4 ವರ್ಷಗಳ ಪದವಿ ಶಿಕ್ಷಣವನ್ನು ಜಾರಿಗೊಳಿಸಲಾಗಿತ್ತು. ಅದನ್ನು ರಾಜ್ಯ ಶಿಕ್ಷಣ ನೀತಿಯಲ್ಲಿ ಕೈಬಿಡಲಾಗಿದೆ. ಈ ಹಿಂದಿನಂತೆ 3 ವರ್ಷಗಳ ಪದವಿ ಶಿಕ್ಷಣ ಬಳಿಕ 2 ವರ್ಷದ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಜಾರಿಗೊಳಿಸಲು ಶಿಫಾರಸ್ಸು ಮಾಡಲಾಗಿದೆ. 4 ವರ್ಷಗಳ ಪಿಎಚ್‌ಡಿ ಕೋರ್ಸ್ ಜಾರಿಗೆ ಶಿಫಾರಸ್ಸು ಮಾಡಲಾಗಿದೆ.

ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಶಿಕ್ಷಕರ ನೇಮಕಾತಿಯನ್ನು ನಿಲ್ಲಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಇನ್ನೂ ಪಿಯು ಕಾಲೇಜುಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣ ಪರಿಚಯಿಸಲು ಸಮಿತಿ ಶಿಫಾರಸ್ಸು ಮಾಡಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions