ಭಟ್ಕಳ: ತಾಲೂಕಿನ ಹಾಡುವಳ್ಳಿ ಗ್ರಾಮದ ಕುಳವಾಡಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ (ಜೂಜಾಟ) ಅಡ್ಡೆಯ ಮೇಲೆ ಭಟ್ಕಳ ಗ್ರಾಮೀಣ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಜೂಜಾಟಕ್ಕೆ ಬಳಸಿದ್ದ ವಾಹನಗಳು, ನಗದು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ರವಿವಾರ ಸಂಜೆ ಸಮಯದಲ್ಲಿ, ಕುಳವಾಡಿ ಅರಣ್ಯ ಪ್ರದೇಶದಲ್ಲಿ ಕೆಲವರು ಹಣದ ಪಂಥ ಕಟ್ಟಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಟ್ಕಳ ಗ್ರಾಮೀಣ ಠಾಣೆಯ ಪಿ.ಎಸ್.ಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಪೊಲೀಸರನ್ನು ಕಂಡ ತಕ್ಷಣ ಜೂಜುಕೋರರು ಓಡಲು ಯತ್ನಿಸಿದ್ದು, ಈ ಪೈಕಿ ಆರು ಜನರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಬಂಧಿತರಾದವರನ್ನು ಪಿನ್ನುಪಾಲ ಬೆಳಕೆಯ ಮಂಜುನಾಥ ಹೊನ್ನಪ್ಪ ನಾಯ್ಕ , ಹೊಸ್ಮನೆ ಮುಂಡಳ್ಳಿಯ ಶ್ರೀಕಾಂತ ಮಾದೇವ ನಾಯ್ಕ , ಕಂಚಿಕೇರಿ ವಾಚಾಲರಮನೆಯ ದುರ್ಗಪ್ಪ ಹೊನ್ನಪ್ಪ ನಾಯ್ಕ , ಕಲ್ಲಬ್ಬೆ ಮಾರುಕೇರಿಯ ಅನಂತ ನಾಗಪ್ಪ ಬಾಂದಿ , ತಲಾಂದ ಮುಟ್ಟಳ್ಳಿಯ ಮಾಸ್ತಪ್ಪ ಮಂಜಪ್ಪ ನಾಯ್ಕ ಹಾಗೂ ಹಾರನಗದ್ದೆ ಹಾಲಿಯ ಮಂಜುನಾಥ ಶನಿಯಾರ ನಾಯ್ಕ ಎಂದು ಗುರುತಿಸಲಾಗಿದೆ. ಯಲ್ವಡಿಕವೂರದ ಲಕ್ಷ್ಮಣ ಬಡಿಯಾ ನಾಯ್ಕ ಎಂಬಾತ ದಾಳಿಯ ವೇಳೆ ಸ್ಥಳದಿಂದ ಪರಾರಿಯಾಗಿದ್ದಾನೆ.
ದಾಳಿಯ ವೇಳೆ ಪೊಲೀಸರು ವಾಹನಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜೂಜಾಟಕ್ಕೆ ಬಳಸಿದ್ದ 6,660 ರೂಪಾಯಿ ನಗದು, ಎರಡು ಹುಂಜಗಳು (ಕೋಳಿಗಳು) ಹಾಗೂ ಅವುಗಳಿಗೆ ಕಟ್ಟಲಾಗಿದ್ದ ಸಣ್ಣ ಕತ್ತಿಗಳನ್ನು ಜಪ್ತಿ ಮಾಡಲಾಗಿದೆ.
ಇದರೊಂದಿಗೆ 40,000 ರೂಪಾಯಿ ಅಂದಾಜು ಮೌಲ್ಯದ ಹೀರೋ ಗ್ಲಾಮರ್ ಮೋಟಾರ್ ಸೈಕಲ್, ಹೀರೋ ಪ್ಯಾಶನ್ ಪ್ರೋ , 60,000 ರೂ. ಮೌಲ್ಯದ ಟಿವಿಎಸ್ ಅಪಾಚಿ ಬೈಕ್ ಹಾಗೂ 50,000 ರೂ. ಮೌಲ್ಯದ ಹೊಂಡಾ ಶೈನ್ ಬೈಕ್ ಸೇರಿ ಒಟ್ಟು ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಕ್ರಮ ಚಟುವಟಿಕೆಗಳ ವಿರುದ್ಧ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions