Advertisement

ಪಾದೂರು ISPRL 2ನೇ ಹಂತದ ಯೋಜನೆಗೆ ಭಾರಿ ವಿರೋಧ; ಫೆ 27 (ನಾಳೆ) ಬೃಹತ್ ಪ್ರತಿಭಟನೆ

ಉಡುಪಿ ಜಿಲ್ಲೆಯ ಕಾಪುವಿನ ಪಾದೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಐಎಸ್‌ಪಿಆರ್‌ಎಲ್ (ISPRL) ಕಚ್ಚಾ ತೈಲ ಸಂಗ್ರಹಣಾ ಘಟಕದ 2ನೇ ಹಂತದ ಯೋಜನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯೋಜನೆಯ ಕಾಮಗಾರಿಯನ್ನು ಮೇಘಾ ಇಂಜಿನಿಯರಿಂಗ್ (MEIL) ಖಾಸಗಿ ಕಂಪನಿಗೆ 60 ವರ್ಷಗಳ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದ್ದು, ಈ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.

ಸುಮಾರು 15 ವರ್ಷಗಳ ಹಿಂದೆ ಆರಂಭಗೊಂಡ ಈ ಕೇಂದ್ರ ಸರ್ಕಾರದ ಯೋಜನೆ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಅದರ ವಿಸ್ತರಣೆಯ ಭಾಗವಾಗಿ 2ನೇ ಹಂತದ ಕಾಮಗಾರಿ ಪ್ರಾರಂಭಿಸಲು ಕಂಪನಿ ಅಗತ್ಯ ಇಲಾಖೆಗಳ ಸಮರ್ಪಕ ಅನುಮತಿಗಳನ್ನು ಪಡೆಯದೆ, ಸ್ಥಳೀಯರ ಗಮನಕ್ಕೆ ತರದೆ ಏಕಾಏಕಿ ಕೆಲಸ ಆರಂಭಿಸಿದೆ ಎಂದು ಆರೋಪಿಸಲಾಗಿದೆ. ಬಂಡೆ ಸ್ಪೋಟ ಕಾರ್ಯವನ್ನು ಗುಪ್ತವಾಗಿ ನಡೆಸಲಾಗುತ್ತಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಹಿಂದೆ ನಡೆದ ಬಂಡೆ ಸ್ಫೋಟ ಸಂದರ್ಭಗಳಲ್ಲಿ ಅನಾಹುತಗಳು ಸಂಭವಿಸಿ ಹಲವು ಮನೆಗಳಿಗೆ ಹಾನಿಯಾಗಿದ್ದಲ್ಲದೆ, ಬಾವಿ ಹಾಗೂ ಕೊಳವೆ ಬಾವಿಗಳ ನೀರು ಬತ್ತಿಹೋಗಿದ್ದ ಘಟನೆಗಳು ನಡೆದಿದ್ದವು ಎಂದು ಸ್ಥಳೀಯರು ದೂರಿದ್ದಾರೆ. ಇದೀಗ ಮತ್ತೆ ಅದೇ ರೀತಿಯ ಕಾಮಗಾರಿ ಆರಂಭಿಸಿರುವುದು ಪರಿಸರ ಹಾಗೂ ಜನರ ಸುರಕ್ಷತೆ ಕುರಿತಾಗಿ ಗಂಭೀರ ಚಿಂತೆ ಮೂಡಿಸಿದೆ.

ಇನ್ನೂ, ಮೇಘಾ ಇಂಜಿನಿಯರಿಂಗ್ ಕಂಪನಿಯು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೆ ಹೊರ ರಾಜ್ಯದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದು, ಇದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ “ಪಾದೂರು ಉಳಿಸಿ – ಪರಿಸರ ರಕ್ಷಿಸಿ” ಹೋರಾಟ ಸಮಿತಿಯ ನೇತೃತ್ವದಲ್ಲಿ ಫೆಬ್ರವರಿ 27, 2026 (ಶುಕ್ರವಾರ) ಬೆಳಿಗ್ಗೆ 10.00 ಗಂಟೆಗೆ ಪಾದೂರು ಐಎಸ್‌ಪಿಆರ್‌ಎಲ್ ಘಟಕದ ಎದುರು ಬೃಹತ್ ಪ್ರತಿಭಟನೆ ಸಭೆ ಆಯೋಜಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions