ತಮಿಳುನಾಡಿನಲ್ಲಿ 10 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅತ್ಯಂತ ದುಃಖಕರ ಮತ್ತು ಖಂಡನೀಯ ಘಟನೆ. ಇಂತಹ ಘಟನೆಗಳು ಸಮಾಜವನ್ನು ಬೆಚ್ಚಿಬೀಳಿಸುತ್ತಿರುವ ಸಂದರ್ಭದಲ್ಲಿ, ಮಕ್ಕಳ ಸುರಕ್ಷತೆ ಮತ್ತು ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸರಿಯಾದ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ನಾಗೇಂದ್ರ ಪುತ್ರನ್ ಕೋಟ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಾತನಾಡಿ, ಪ್ರೌಢಶಾಲಾ ಹಂತದಲ್ಲೇ ಲೈಂಗಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವ ಅಗತ್ಯವಿದೆ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. “ಲೈಂಗಿಕತೆ ಎನ್ನುವುದು ಮಾನವ ಜೀವನದ ಸಹಜ ಮತ್ತು ಮಹತ್ವದ ಭಾಗ. ಆದರೆ ಅದರ ಬಗ್ಗೆ ಸರಿಯಾದ ಅರಿವು ಇಲ್ಲದ ಕಾರಣ ಹದಿಹರೆಯದ ಯುವಕರು ಹಾಗೂ ಯುವತಿಯರು ದಾರಿ ತಪ್ಪುತ್ತಿದ್ದಾರೆ. ಸಮಾಜದಲ್ಲಿ ದಿನದಿಂದ ದಿನಕ್ಕೆ ಗ್ಯಾಂಗ್ ರೇಪ್, ಬಾಲಕಿಯರ ಮೇಲಿನ ದೌರ್ಜನ್ಯ, ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಹಾಗೂ ಅಬಾರ್ಷನ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ” ಎಂದು ಹೇಳಿದ್ದಾರೆ.
ಪ್ರೌಢಶಾಲೆಗಳಲ್ಲಿ ವಾರಕ್ಕೆ ಕನಿಷ್ಠ ಒಂದು ಪಾಠದ ಅವಧಿಯನ್ನು ಲೈಂಗಿಕ ಶಿಕ್ಷಣಕ್ಕೆ ಮೀಸಲಿಡಬೇಕು. ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ತರಗತಿಗಳ ಮೂಲಕ ದೈಹಿಕ ಬದಲಾವಣೆ, ಸುರಕ್ಷತೆ, ಲೈಂಗಿಕ ದೌರ್ಜನ್ಯದಿಂದ ರಕ್ಷಣೆ, ಕಾನೂನು ಅರಿವು ಹಾಗೂ ಮಾನಸಿಕ ಆರೋಗ್ಯದ ಕುರಿತು ಸಮಗ್ರ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
“ಸೆಕ್ಸ್ ಶಿಕ್ಷಣ ನೀಡಿದ ತಕ್ಷಣವೇ ಅಪರಾಧಗಳು ಸಂಪೂರ್ಣ ನಿಲ್ಲುತ್ತವೆ ಎಂದಲ್ಲ. ಆದರೆ ಮಕ್ಕಳ ಮನಸ್ಸಿನಲ್ಲಿ ಲೈಂಗಿಕತೆಯ ಬಗ್ಗೆ ಜವಾಬ್ದಾರಿ, ಭಯ ಮತ್ತು ಅರಿವು ಮೂಡಿಸಿದರೆ ಇಂತಹ ಪ್ರಕರಣಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಇಂದಿನ ಪರಿಸ್ಥಿತಿಯಲ್ಲಿ ಲೈಂಗಿಕ ಶಿಕ್ಷಣವು ಐಚ್ಛಿಕವಲ್ಲ, ಅಗತ್ಯವಾಗಿದೆ” ಎಂದು ಹೇಳಿದರು.
ಇದೇ ವೇಳೆ OMG 2 ಸಿನಿಮಾವನ್ನು ಉಲ್ಲೇಖಿಸಿದ ಅವರು, ಚಿತ್ರದಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಆರಂಭದಲ್ಲಿ ಜನರು ಅದನ್ನು ಹಾಸ್ಯವಾಗಿ ತೆಗೆದುಕೊಂಡರೂ, ಕೊನೆಯಲ್ಲಿ ಪ್ರತಿಯೊಬ್ಬ ಮಗುವಿಗೂ ಸರಿಯಾದ ಲೈಂಗಿಕ ಶಿಕ್ಷಣ ಅಗತ್ಯ ಎಂಬ ಸಂದೇಶ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಂಡು ಪ್ರೌಢಶಾಲಾ ಮಟ್ಟದಲ್ಲಿ ವೈಜ್ಞಾನಿಕ ಹಾಗೂ ಮೌಲ್ಯಾಧಾರಿತ ಲೈಂಗಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions