Advertisement

ಎಲ್‌ಪಿಜಿ ಸಂಕಷ್ಟ: ಮೋದಿ ಸರ್ಕಾರ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ಆಕ್ರೋಶ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಇಂಧನ ನೀತಿಗಳ ವೈಫಲ್ಯದಿಂದ ಕರ್ನಾಟಕದ 5 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರ ಜೀವನ ಧ್ವಂಸವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಜಂಟಿ ಪತ್ರಿಕಾ ಹೇಳಿಕೆ ನೀಡಿದ ಅವರು, ಎಲ್‌ಪಿಜಿ ಪೂರೈಕೆಯ ಕೊರತೆ ಹಾಗೂ ಭಾರೀ ಬೆಲೆ ಏರಿಕೆಯಿಂದ ಆಟೋ ಚಾಲಕರು, ಸಣ್ಣ ಹೋಟೆಲ್ ಮಾಲಕರು, ವ್ಯಾಪಾರಿಗಳು ಮತ್ತು ಗಿಗ್ ಕಾರ್ಮಿಕರ ಜೀವನೋಪಾಯಕ್ಕೆ ಗಂಭೀರ ಹೊಡೆತ ಬಿದ್ದಿದೆ ಎಂದು ಆರೋಪಿಸಿದ್ದಾರೆ. ಕೆಲವೇ ವಾರಗಳಲ್ಲಿ ಆಟೋ ಗ್ಯಾಸ್ ಬೆಲೆ ₹58-61ರಿಂದ ₹105-120ಕ್ಕೆ ಏರಿಕೆಯಾಗಿ ಶೇ.106ರಷ್ಟು ಹೆಚ್ಚಳ ಕಂಡಿದೆ ಎಂದು ಅವರು ಹೇಳಿದ್ದಾರೆ.

ಖಾಸಗಿ ಅನಿಲ ಪೂರೈಕೆ ಕೇಂದ್ರಗಳಲ್ಲಿ ಲೀಟರ್‌ಗೆ ₹125-135 ವಸೂಲಿ ಮಾಡಲಾಗುತ್ತಿದ್ದು, ಸಿಎನ್‌ಜಿ ಕೊರತೆಯೂ ಹೆಚ್ಚಾಗಿದೆ. ಸರ್ಕಾರದ ಅನಿಲ ನಿಲ್ದಾಣಗಳು ಬಹುತೇಕ ಮುಚ್ಚಲ್ಪಟ್ಟಿದ್ದು, ಬೆಂಗಳೂರಿನಲ್ಲಿ ಇದ್ದ 60-70 ನಿಲ್ದಾಣಗಳಲ್ಲಿ ಈಗ ಕೇವಲ 10-15 ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ದೂರಿದ್ದಾರೆ.

ಪ್ರತಿ ದಿನದ ಅನಿಲ ಪೂರೈಕೆ 12,000 ಲೀಟರ್‌ನಿಂದ 6,000 ಲೀಟರ್‌ಗೆ ಕುಸಿದಿದ್ದು, ವಾಹನಕ್ಕೆ ₹400 ಮಿತಿಯಲ್ಲಿ ಮಾತ್ರ ಪೂರೈಕೆ ನಡೆಯುತ್ತಿದೆ. ಬೆಳಗ್ಗೆ 5 ಗಂಟೆಯಿಂದಲೇ ದೀರ್ಘ ಸಾಲಿನಲ್ಲಿ ನಿಂತರೂ ಆಟೋ ಚಾಲಕರು ಖಾಲಿ ಕೈಯಲ್ಲಿ ಮರಳುತ್ತಿರುವ ದುಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಬೆಲೆ ₹2,161 ದಾಟಿದ್ದು, ಕಾಳಸಂತೆಯಲ್ಲಿ ಸಿಲಿಂಡರ್ ₹6,000ಕ್ಕೂ ಮಾರಾಟವಾಗುತ್ತಿದೆ ಎನ್ನಲಾಗಿದೆ. ಇದರಿಂದ ರಸ್ತೆಬದಿ ವ್ಯಾಪಾರಿಗಳು, ಡಾಬಾಗಳು ಹಾಗೂ ಫುಡ್ ಡೆಲಿವರಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂಧನ ಪೂರೈಕೆಯ ಸಂಪೂರ್ಣ ನಿಯಂತ್ರಣ ಕೇಂದ್ರ ಸರ್ಕಾರದದ್ದಾಗಿದ್ದು, ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ ಕಾಂಗ್ರೆಸ್ ನಾಯಕರು, ಇದು ಕೇವಲ ನೀತಿ ವೈಫಲ್ಯವಲ್ಲ, ಕೇಂದ್ರ ಸರ್ಕಾರದ ನಿರ್ಲಕ್ಷ ಮತ್ತು ಆಡಳಿತ ವೈಫಲ್ಯದ ಸಂಕೇತವಾಗಿದೆ ಎಂದು ಟೀಕಿಸಿದ್ದಾರೆ.

ಜನಸಾಮಾನ್ಯರ ಸಂಕಷ್ಟದ ನಡುವೆ ಕೇಂದ್ರ ಸರ್ಕಾರ ಮೌನವಾಗಿದ್ದು, ಬಿಜೆಪಿ-ಜೆಡಿಎಸ್ ಕೇಂದ್ರ ಸಚಿವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದು ಕೇವಲ ಇಂಧನ ಬಿಕ್ಕಟ್ಟಲ್ಲ, ಜನರ ಬದುಕಿನ ತುರ್ತು ಪರಿಸ್ಥಿತಿ ಎಂದು ಎಚ್ಚರಿಸಿರುವ ಅವರು, ಈ ಸಮಸ್ಯೆ ಮುಂದಿನ ಉಪಚುನಾವಣೆಗಳಲ್ಲಿ ಪ್ರತಿಫಲಿಸಲಿದೆ ಎಂದು ಹೇಳಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions