Advertisement

ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಮೇಲೆ ಪ್ರೀತಿ ಇರಲಿ – ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್

ಕೊಂಕಣಿ ಯುವ ಸಂಭ್ರಮ ‘ಕನಾಪ-2025’ ಕವಿತೆ, ನೃತ್ಯ ಹಾಗೂ ಗಾಯನ ಸ್ಪರ್ಧೆ

ಉಡುಪಿ: ಯುವಜನತೆ ಕೊಂಕಣಿ ಭಾಷೆಯನ್ನು ಪ್ರತಿ ಮನೆ ಮನೆಗಳಲ್ಲಿ ಮಾತನಾಡುವುದರ ಮೂಲಕ ಕೊಂಕಣಿ ಸಾಹಿತ್ಯ ಮತ್ತು ಸಂಸ್ಕೃತಿ ಮತ್ತಷ್ಟು ಸಮೃದ್ಧವಾಗಿ ಬೆಳೆಯಲು ಸಾಧ್ಯವಿದೆ. ಭಾಷೆ ಮತ್ತು ಸಾಹಿತ್ಯಕ್ಕೆ ನಮ್ಮ ಪ್ರೀತಿ ಸದಾ ಇರಲಿ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.

ಅವರು ಭಾನುವಾರ ಉಡುಪಿ ಶೋಕಮಾತಾ ಚರ್ಚಿನ ಆವೆ ಮರಿಯ ಸಭಾಂಗಣದಲ್ಲಿ ಕೊಂಕಣಿ ಸಾಹಿತ್ಯ ಕಲಾ ಹಾಗೂ ಸಾಂಸ್ಕೃತಿಕ ಸಂಘಟನೆ ಉಡುಪಿ ಜಿಲ್ಲೆ ಹಾಗೂ ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿವಸದ ಪ್ರಯುಕ್ತ ಯುವ ಜನರಲ್ಲಿ ಕೊಂಕಣಿ ಭಾಷೆಯ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕೊಂಕಣಿ ಯುವ ಸಂಭ್ರಮ ‘ಕನಾಪ-2025’ ಕವಿತೆ, ನೃತ್ಯ ಹಾಗೂ ಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದ ಮಾನ್ಯತೆ ಪಡೆದ ಅಧಿಕೃತ 22 ಭಾಷೆಗಳಲ್ಲಿ ಕೊಂಕಣಿಯೂ ಒಂದು. ನಮ್ಮ ಭಾಷೆಗೆ 1992 ಆಗಸ್ಟ್ 20 ರಂದು ದೊರೆತ ಮಾನ್ಯತೆಯನ್ನು ನಾವು ಕೊಂಕಣಿ ಮಾನ್ಯತಾ ದಿನಾಚರಣೆ ಹೆಸರಲ್ಲಿ ಸಂಭ್ರಮಿಸುತ್ತೇವೆ. ಯುವಜನರಿಗೆ ಇದೊಂದು ಸ್ಪೂರ್ತಿಯಾಗುವುದರೊಂದಿಗೆ ಕೊಂಕಣಿ ಭಾಷೆಯ ಬೆಳವಣಿಗೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸೋಣ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಮಂಗಳೂರು ಇದರ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಮಾತನಾಡಿ ಯುವಜನರಲ್ಲಿ ಇರುವ ಪ್ರತಿಭೆಗಳನ್ನು ಪ್ರದರ್ಶನ ಮಾಡುವುದರಿಂದಾಗಿ ಸಮಾಜದಲ್ಲಿ ಉತ್ತಮ ನಾಯಕನಾಗಿ ಬೆಳೆಯಲು ಅವಕಾಶ ಲಭಿಸುತ್ತದೆ. ನಮ್ಮಲ್ಲಿ ಇರುವ ಪ್ರತಿಭೆಗಳೊಂದಿಗೆ ಉತ್ತಮ ಗುರಿ ಮತ್ತು ಉದ್ದೇಶಗಳನ್ನು ಕೂಡ ಹೊಂದಿರಬೇಕು ಎಂದರು.

ಕಾರ್ಯಕ್ರಮವನ್ನು ಉಡುಪಿ ಉಡುಪಿ ಶೋಕಮಾತಾ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ|ಚಾರ್ಲ್ಸ್ ಮಿನೇಜಸ್ ಜಾನಪದ ವಾದ್ಯ ಗುಮಾಟ್ ಬಡಿದು ಚಾಲನೆ ನೀಡಿ ನಮ್ಮ ಕೊಂಕಣಿ ಭಾಷೆ ಹಾಗೂ ಸಂಸ್ಕೃತಿ ವೈವಿಧ್ಯಮಯವಾಗಿದ್ದು ಅದನ್ನು ಹೊಂದಿರುವ ನಾವು ಧನ್ಯರು. ಯುವ ಜನತೆಗೆ ಇದರ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಕೊಂಕಣಿಯ ಸಂಪ್ರದಾಯದ ಅರಿವು ಮೂಡಿಸಲು ಕನಾಪ-2025 ಅತೀ ಹೆಚ್ಚು ಸಹಕಾರಿಯಾಗಿದೆ, ನಮ್ಮ ಭಾಷೆಯನ್ನು ಬೆಳೆಸಿ ಪೋಷಿಸುವುದರೊಂದಿಗೆ ಮುಂದಿನ ಜನಾಂಗಕ್ಕೂ ಕೂಡ ಇದರ ಅರಿವು ಇರುವಂತೆ ಎಚ್ಚರಿಕೆ ವಹಿಸುವ ಅಗತ್ಯ ಇದೆ ಎಂದರು.

ಕೊಂಕಣಿ ಸಾಹಿತ್ಯ ಕಲೆ ಹಾಗೂ ಸಾಂಸ್ಕೃತಿಕ ಸಂಘಟನೆ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಡಾ. ಫ್ಲಾವಿಯಾ ಕ್ಯಾಸ್ಟಲಿನೊ, ಕಾರ್ಯದರ್ಶಿ ರಿತೇಶ್ ಡಿಸೋಜಾ, ಕೋಶಾಧಿಕಾರಿ ಆಲ್ಫೋನ್ಸ್ ಡಿಕೋಸ್ತಾ, ಸ್ಥಾಪಕ ಅಧ್ಯಕ್ಷರಾದ ಡಾ. ಜೆರಾಲ್ಡ್ ಪಿಂಟೊ, ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ನಿರ್ದೇಶಕ ವಂ|ಸ್ಟೀವನ್ ಫೆರ್ನಾಂಡಿಸ್, ಭಾರತೀಯ ಕಥೊಲಿಕ್ ಯುವ ಸಂಚಾಲದ ಅಧ್ಯಕ್ಷರಾದ ನಿತಿನ್ ಬಾರೆಟ್ಟೊ, ವೈಸಿಎಸ್ ಅಧ್ಯಕ್ಷರಾದ ರಿಯಾನ್ ಟೆಲ್ಲಿಸ್ ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ವಂ|ಆಲ್ವಿನ್ ಸಿಕ್ವೇರಾ, ವಾಲ್ಟನ್ ಡೆಸಾ, ಆಲ್ಡ್ರೀನ್ ಪ್ರೀತ್ ಡಿಕೋಸ್ತಾ ಸಹಕರಿಸಿದರು.

ಇದೇ ವೇಳೆ ಕೊಂಕಣಿ ಭಾಷೆಯಲ್ಲಿ ವಿಶೇಷ ಸಾಧನೆ ತೋರಿದ ಉಡುಪಿ ಶೋಕಮಾತಾ ದೇವಾಲಯದ ರೀವನ್ ಡಾಯಸ್ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಶುಕ್ರವಾರ ನಿಧನರಾದ ಕೊಂಕಣಿ ಸಂಗೀತ, ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜ, ವಿಶ್ವ ಕೊಂಕಣಿ ಕಲಾರತ್ನ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಒಝಾರಿಯೊ ಅವರಿಗೆ ಪುಷ್ಪ ನಮನದ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶೋಕಮಾತಾ ದೇವಾಲಯ ಉಡುಪಿ, ದ್ವಿತೀಯ ಬಹುಮಾನವನ್ನು ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಉದ್ಯಾವರ, ತೃತೀಯ ಬಹುಮಾನವನ್ನು ಸಂತ ತೆರೆಸಾ ಚರ್ಚ್ ಕೆಮ್ಮಣ್ಣು ಪಡೆಯಿತು. ಉತ್ತಮ ಕಾರ್ಯನಿರ್ವಹಣೆಯ ಬಹುಮಾನ ಲೂರ್ಡ್ಸ್ ದೇವಾಲಯ ಕಣಜಾರು ಪಡೆಯಿತು.

ಕಾರ್ಯಕ್ರಮದಲ್ಲಿ ಮೆಕ್ಲಿನ್, ಲಿಶಾ ಸ್ವಾಗತಿಸಿ, ವೆನಿಸಾ , ಜೊಯ್ಸ್ ವಂದಿಸಿದರು. ಜೋಸ್ವಿನ್ ಆರಾನ್ಹಾ, ಎಡ್ರೋಯ್ ನಝರೆತ್ ಕಾರ್ಯಕ್ರಮ ನಿರೂಪಿಸಿದರು

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions