ಕೋಟ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಅವರು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರು ವಿಷಯವನ್ನು ನೇರವಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರ ಗಮನಕ್ಕೆ ತಂದರು.
ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಹಿಂದಿನಂತೆ ಸಾರ್ವಜನಿಕರಿಗೆ ಲಭ್ಯವಿದ್ದ ಎಲ್ಲಾ ಆರೋಗ್ಯ ಸೇವೆಗಳು ಮುಂದುವರಿಯಬೇಕು ಹಾಗೂ ಯಾವುದೇ ಕಾರಣಕ್ಕೂ ಕೇಂದ್ರವನ್ನು ಕೆಳದರ್ಜೆಗೆ ಇಳಿಯಲು ಬಿಡಬಾರದು ಎಂಬುದಾಗಿ ಅವರು ಸ್ಪಷ್ಟವಾಗಿ ಮನವಿ ಮಾಡಿದರು. ಜೊತೆಗೆ, ಆರೋಗ್ಯ ಕೇಂದ್ರವನ್ನು ಇನ್ನಷ್ಟು ಬಲಪಡಿಸಿ ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಜಿಲ್ಲಾ ನಾಯಕರಲ್ಲಿ ವಿನಂತಿಸಿದರು.
ಈ ವಿಚಾರವಾಗಿ ಆರೋಗ್ಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕೋಟ ನಾಗೇಂದ್ರ ಪುತ್ರನ್, “ಕೋಟ ಭಾಗದ ಸಾರ್ವಜನಿಕರ ಹೋರಾಟ ಹಾಗೂ ಸಾಮಾಜಿಕ ಕಾಳಜಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಸಮುದಾಯ ಆರೋಗ್ಯ ಕೇಂದ್ರವನ್ನು ಯಾವುದೇ ಕಾರಣಕ್ಕೂ ಕೆಳದರ್ಜೆಗೆ ಹೋಗಲು ಬಿಡುವುದಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಾರ್ವಜನಿಕರ ನ್ಯಾಯಸಮ್ಮತ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲವಾಗಿ ನಿಂತಿದೆ ಎಂದು ಅವರು ಹೇಳಿದರು.
“ಸಾರ್ವಜನಿಕ ಹಿತಶಕ್ತಿಯೇ ನಮ್ಮ ಏಕೈಕ ಅಜೆಂಡಾ. ಬಿಜೆಪಿ ಬೆಂಬಲಿತ ರಾಜಕೀಯ ಹಿತಶಕ್ತಿಗಳಿಗೆ ನಮ್ಮ ಬೆಂಬಲ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions