Advertisement

ನಾಲಪಾಡ್ ಹೇಳಿಕೆಯನ್ನು ತಿರುಚಿ ಟ್ರೋಲ್ ಮಾಡುವುದು ಸರಿಯಲ್ಲ: ಅಜಿತ್ ಶೆಟ್ಟಿ

ಮೊಹಮ್ಮದ್ ಹ್ಯಾರಿಸ್ ನಾಲಪಾಡ್ ಅವರ ಹೇಳಿಕೆಯನ್ನು ಪೂರ್ಣ ಸಂದರ್ಭದಿಂದ ಬೇರ್ಪಡಿಸಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು ಅಥವಾ ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ–ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಅಜಿತ್ ಶೆಟ್ಟಿ ಹೇಳಿದ್ದಾರೆ.

ನಾಲಪಾಡ್ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಾವು ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅವರೊಂದಿಗೆ ಕೆಲಸ ಮಾಡಿದ್ದು, ಆ ಸಂದರ್ಭದಲ್ಲಿ ರಾಜ್ಯಾದ್ಯಂತ ಯುವ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಡೆದ ಹಲವು ಹೋರಾಟಗಳು, ಪ್ರತಿಭಟನೆಗಳು ಹಾಗೂ ಸಂಘಟನಾ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳ ಯುವಕರನ್ನು ಸಂಘಟಿಸಿ ಜನಪರ ವಿಚಾರಗಳಿಗಾಗಿ ನಾಲಪಾಡ್ ಅವರು ಹಲವು ಪ್ರತಿಭಟನೆಗಳನ್ನು ನಡೆಸಿದ್ದರು. ಸಾಮಾನ್ಯ ಕುಟುಂಬಗಳಿಂದ ಬಂದ ಯುವಕರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ, ರಾಜಕೀಯ ಹಾಗೂ ಸಂಘಟನೆಯಲ್ಲಿ ಅವಕಾಶ ಕಲ್ಪಿಸಲು ಅವರು ಪ್ರಯತ್ನಿಸಿರುವುದನ್ನು ತಾವು ನೇರವಾಗಿ ಕಂಡಿದ್ದೇನೆ ಎಂದು ಅಜಿತ್ ಶೆಟ್ಟಿ ಹೇಳಿದ್ದಾರೆ.

ನಾಲಪಾಡ್ ಅವರ ಯಾವುದೇ ಹೇಳಿಕೆಯನ್ನು ಅದರ ಸಂಪೂರ್ಣ ಸಂದರ್ಭವನ್ನು ಗಮನಿಸದೆ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ಆರೋಗ್ಯಕರ ಪ್ರಜಾಪ್ರಭುತ್ವದ ಚರ್ಚೆಯಲ್ಲ. ವಿರೋಧ ಪಕ್ಷಗಳು ಅಥವಾ ಇತರ ರಾಜಕೀಯ ಪಕ್ಷಗಳು ಟೀಕೆ ಮಾಡುವುದು ಸಹಜ. ಆದರೆ ವೈಯಕ್ತಿಕ ನಿಂದನೆ ಅಥವಾ ಹೇಳಿಕೆಗಳನ್ನು ತಿರುಚುವ ಬದಲು ವಿಷಯಾಧಾರಿತವಾಗಿ ಚರ್ಚೆ ನಡೆಸುವುದು ರಾಜಕೀಯವಾಗಿ ಹೆಚ್ಚು ಜವಾಬ್ದಾರಿಯುತ ನಡೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುವ ಕಾಂಗ್ರೆಸ್ ಮೂಲಕ ಸಾವಿರಾರು ಯುವಕರಿಗೆ ರಾಜಕೀಯ ವೇದಿಕೆ ಕಲ್ಪಿಸುವಲ್ಲಿ ನಾಲಪಾಡ್ ಅವರ ಸಂಘಟನಾ ಅನುಭವವನ್ನು ಹತ್ತಿರದಿಂದ ಕಂಡಿದ್ದೇನೆ. ಇಂದಿಗೂ ಅವರು ಯುವಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಸಾರ್ವಜನಿಕ ಪಾತ್ರವನ್ನು ಹೊಂದಿದ್ದಾರೆ ಎಂದು ಅಜಿತ್ ಶೆಟ್ಟಿ ತಿಳಿಸಿದ್ದಾರೆ.

ಯಾವುದೇ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದರಿಂದ ವಿಷಯದ ಗಂಭೀರತೆ ಕಡಿಮೆಯಾಗುತ್ತದೆ. ಆದ್ದರಿಂದ ನಾಲಪಾಡ್ ಅವರ ಹೇಳಿಕೆಯ ಸಂಪೂರ್ಣ ಸಂದರ್ಭವನ್ನು ಗಮನಿಸಿ, ವಾಸ್ತವಾಂಶದ ಆಧಾರದ ಮೇಲೆ ಚರ್ಚೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions