ಮಹಿಳೆಯರಿಗೆ ಸಾಧನೆ ಮಾಡಲು ಕಷ್ಟ ಆಗಬಹುದು, ಆದರೆ ಅಸಾಧ್ಯವಾದ ಕೆಲಸವಂತು ಅಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ವಿಜಯ ಕರ್ನಾಟಕ ಡಿಜಿಟಲ್ ವತಿಯಿಂದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಕ್ತಿ ಸಂವಾದ - 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಾನು ಗ್ರಾಮೀಣ ಭಾಗದಿಂದ ಬಂದ ಹೆಣ್ಣು ಮಗಳು, ನಾನು ಸವೆಸಿದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕೇವಲ ನನ್ನದಷ್ಟೇ ಕಥೆಯಲ್ಲ, ಇಲ್ಲಿರುವ ಪ್ರತಿಯೊಬ್ಬ ಮಹಿಳೆಯರದ್ದು ಅವರದ್ದೇ ಆದ ಕಥೆಯಿದೆ ಎಂದರು.
ಇದು ನನ್ನ ಹೃದಯಕ್ಕೆ ಹತ್ತಿರವಾಗಿರುವ ಸಂವಾದ, ಹಿಂದಿನ ಕಾಲದಲ್ಲಿ ಮಹಿಳೆಯರನ್ನು ಕೇವಲ ಅಡಿಗೆ ಮಾಡಲು, ಮಕ್ಕಳನ್ನು ಹೇರುವುದಕ್ಕಷ್ಟೇ ಸೀಮಿತ ಮಾಡಲಾಗಿತ್ತು. ಈಗ ಕಾಲ ಬದಲಾಗಿದೆ. ಹಿಂದಿನ ಕಾಲವನ್ನು ಮೆಟ್ಟಿನಿಂತು ಬದಲಾಗಿದ್ದೀವಿ, ಈ ಸಮಾಜದ ಸೃಷ್ಟಿಕರ್ತರು ನಾವು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈಗ ಮಹಿಳೆಯರು ಅವಕಾಶವನ್ನು ಕೇಳಿಕೊಂಡು ಹೋಗುವ ಪರಿಸ್ಥಿತಿ ಇಲ್ಲ, ಇಂದು ಮಹಿಳೆಯರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಸನ್ನಿವೇಶವನ್ನು ಸೃಷ್ಟಿ ಮಾಡಿದ್ದೇವೆ. ಶೈಕ್ಷಣಿಕವಾಗಿ ನಮ್ಮ ಮಹಿಳೆಯರು ಸಾಕಷ್ಟು ಮುಂದಿದ್ದಾರೆ ಎಂದರು.
ಈ ಹಿಂದೆ ಗಂಡ ಸತ್ತರೆ ಮಹಿಳೆಯರಿಗೆ ಬದುಕುವ ಹಕ್ಕಿಲ್ಲ ಎನ್ನುವಂಥ ಪರಿಸ್ಥಿತಿ ಇತ್ತು. ಇವತ್ತು ಸಾಕಷ್ಟು ಬದಲಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ಮತದಾನದ ಮೂಲಕ ಸರ್ಕಾರವನ್ನೇ ತರಬಹುದು, ಇಂದು ಮಹಿಳೆಯರಲ್ಲಿ ಒಗ್ಗಟ್ಟು ಜಾಸ್ತಿಯಿದ್ದು, ವಿಚಾರ ಮಾಡುವ ಮನಸ್ಥಿತಿ ಹೊಂದಿದ್ದಾರೆ, ಹೆಣ್ಣು ಕೇವಲ ಭವಿಷ್ಯ ಅಲ್ಲ, ವರ್ತಮಾನ ಕೂಡ ಎಂದು ಸಚಿವರು ಹೇಳಿದರು.
ಇವತ್ತು ನಮ್ಮ ಸರ್ಕಾರ ಕೂಡ ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ಕೊಡುತ್ತಿದೆ. ಮಹಿಳೆಯರಿಗಾಗಿ ಜಾರಿಗೆ ತರಲಾಗಿರುವ ಶಕ್ತಿ ಯೋಜನೆ, ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಂದ ಹಿಡಿದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಿದೆ. ಇಲ್ಲಿವರೆಗೂ ನಮ್ಮ ಸರ್ಕಾರ 1.26 ಕೋಟಿ ಮಹಿಳೆಯರಿಗೆ ತಲಾ 48 ಸಾವಿರ ರೂಪಾಯಿಯಂತೆ ಗೃಹಲಕ್ಷ್ಮೀ ಯೋಜನೆ ಮೂಲಕ ಹಣ ಸಂದಾಯ ಮಾಡಿದೆ. ಗೃಹಲಕ್ಷ್ಮೀ ಯೋಜನೆಯಿಂದ ಜೀವನ ಬದಲಾಗುತ್ತೆ ಎಂದು ಹೇಳುವುದಿಲ್ಲ, ಆದರೆ ತಕ್ಕ ಮಟ್ಟಿಗೆ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ಮಾಪಕರಾದ ಗೀತಾ ಶಿವರಾಜ್ ಕುಮಾರ್, ಬಿಎಂಟಿಎಫ್ ಎಡಿಜಿಪಿ ಡಿ.ರೂಪಾ ಮೌದ್ಗಿಲ್, ಚಲನಚಿತ್ರ ನಟಿ ಶ್ವೇತಾ ಶ್ರೀವತ್ಸ, ಮೌಂಟ್ ಕಾರ್ಮೆಲ್ ಕಾಲೇಜಿನ ನಿರ್ದೇಶಕರು ಹಾಗೂ ಕಾರ್ಯದರ್ಶಿ ಸಿಸ್ಟರ್ ಎಂ.ಅಲ್ದಿನಾ, ಪ್ರಾಂಶುಪಾಲರಾದ ಪ್ರೊ.ಜಾರ್ಜ್ ಲೇಖಾ, ವಿಜಯ ಕರ್ನಾಟಕ ಡಿಜಿಟಲ್ ಸಂಪಾದಕರಾದ ಪ್ರಸಾದ್ ನಾಯಿಕ ಸೇರಿದಂತೆ ಮೌಂಟ್ ಕಾರ್ಮೆಲ್ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions