ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಜನವರಿ 2025ರ ಮತದಾರರ ಪಟ್ಟಿಗಳನ್ನು ಮರುಸ್ಥಾಪಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನ–ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
SIR ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಅಳಿಸಲ್ಪಡುವ ಆತಂಕವಿದ್ದು, ಈ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಕಾನೂನುಬದ್ಧತೆಯ ಕುರಿತು ಗಂಭೀರ ಪ್ರಶ್ನೆಗಳು ಎದುರಾಗಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಜನವರಿ 2025ರಲ್ಲಿ ಇದ್ದ ಮತದಾರರ ಪಟ್ಟಿಗಳನ್ನು ಮರುಸ್ಥಾಪಿಸಿ, ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಫಾರಂ 7ರ ದುರುಪಯೋಗದ ಆರೋಪ
ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಹೆಸರುಗಳನ್ನು ಅಳಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದ್ದು, ಬೀದಿ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಒಂಟಿ ಮಹಿಳೆಯರು, LGBTQIA ಸಮುದಾಯದವರು, ದಲಿತರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ದುರ್ಬಲ ವರ್ಗಗಳ ಮತದಾನದ ಹಕ್ಕಿಗೆ ಧಕ್ಕೆಯಾಗುವ ಆತಂಕ ವ್ಯಕ್ತಪಡಿಸಲಾಗಿದೆ. ಅಳಿಸಲಾದ ಹೆಸರುಗಳನ್ನು ಫಾರಂ 6ರ ಮೂಲಕ ಮರುಸೇರ್ಪಡೆಗೊಳಿಸುವ ಪ್ರಕ್ರಿಯೆಯೂ ಸಮರ್ಪಕವಾಗಿಲ್ಲ ಎಂದು ದೂರಲಾಗಿದೆ.
ಅರ್ಹ ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಫಾರಂ 7 ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿಕೊಂಡು ರಾಜಕೀಯ ಪ್ರೇರಿತವಾಗಿ ಹೆಸರುಗಳನ್ನು ಅಳಿಸುವ ಸಾಧ್ಯತೆಗಳಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಫಾರಂ 6ರಲ್ಲಿ ಕಾನೂನುಬಾಹಿರ ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಆರೋಪವನ್ನೂ ಉಲ್ಲೇಖಿಸಿರುವ ಸಂಘಟನೆಗಳು, ಚುನಾವಣಾ ಆಯೋಗದ ಸ್ವಾಯತ್ತತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕುರಿತು ಪ್ರಶ್ನೆಗಳನ್ನು ಎತ್ತಿವೆ. ದಾಖಲೆಗಳ ಕೊರತೆ, ವಲಸೆ ಹಾಗೂ ಹೆಸರುಗಳಲ್ಲಿನ ವ್ಯತ್ಯಾಸಗಳಿಂದ ಅಂಚಿನಲ್ಲಿರುವ ಸಮುದಾಯಗಳು ಮತದಾರರ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿವೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಭವಿಷ್ಯದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಪಾರದರ್ಶಕ, ಕಾನೂನುಬದ್ಧ ಮತ್ತು ಸಾರ್ವಜನಿಕ ಹೊಣೆಗಾರಿಕೆಗೆ ಒಳಪಡುವ ರೀತಿಯಲ್ಲಿ ನಡೆಸಬೇಕು. ಹೆಸರುಗಳ ಅಳಿಸುವಿಕೆ ಮತ್ತು ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆಯ ದುರುಪಯೋಗ ತಡೆಯಲು ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಈ ಕ್ರಮಗಳನ್ನು ಕೈಗೊಳ್ಳಲು ವಿಫಲರಾದರೆ ಅವರು ಕೂಡ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ಜಿಲ್ಲಾಧ್ಯಕ್ಷ ಫಾ. ವಿನಯ್ ಮಸ್ಕರೇನಸ್, ಸಿಪಿಐ(ಎಂಎಲ್) ಮುಖಂಡ ರಾಮಣ್ಣ ವಿಟ್ಲ, ವೆಲ್ಫೇರ್ ಪಾರ್ಟಿ ಜಿಲ್ಲಾ ಮುಖಂಡರಾದ ಮುನೀರ್ ಪದ್ರೆಂಗಿ ಮತ್ತು ಮುಹಮ್ಮದ್ ಸೈಫ್, ಎಡಿಪಿಐ ಜಿಲ್ಲಾ ಮುಖಂಡ ಅನ್ವರ್ ಸಾದತ್, ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನೀತು ಡಿಸೋಜ, ಜಮಾಅತೆ ಇಸ್ಲಾಮೀ ಹಿಂದ್ ಮುಖಂಡ ಅಮೀನ್ ಅಹ್ಸನ್, ವೈಆರ್‌ಎ ಜಿಲ್ಲಾ ನಾಯಕ ನ್ಯಾಯವಾದಿ ಲುಕ್ಮಾನ್ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions