Advertisement

ನನ್ನ ಮಾತಲ್ಲಿ ತಪ್ಪು ಹುಡುಕುವವರೇ ಹೆಚ್ಚು, ನನ್ನ ಬಾಯಲ್ಲಿ ತಪ್ಪು ನುಡಿಸದಂತೆ ಕೃಷ್ಣನಲ್ಲಿ ಪ್ರಾರ್ಥನೆ - ಡಿಸಿಎಂ ಡಿ.ಕೆ. ಶಿವಕುಮಾರ್

“ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ಬಂಡೆಯಿಂದ ಮೆಟ್ಟಿಲು, ಆಧಾರ ಸ್ತಂಭ, ಜಲ್ಲಿ, ವಿಗ್ರಹ ಮಾಡಬಹುದು. ಅದೇ ರೀತಿ ನೀವು ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಮಠಾಧೀಶರಾದ ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. “ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವುದೇ ಹೆಚ್ಚಾಗಿದೆ. ಹೀಗಾಗಿ ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ. ಶ್ರೀಕೃಷ್ಣನ ದಿವ್ಯ ದರ್ಶನ ಮಾಡಿ ಶ್ರೀಗಳ ಜೊತೆಯಲ್ಲಿ ಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ” ಎಂದು ತಿಳಿಸಿದರು.

“ಧರ್ಮ, ಪೂಜೆ, ಭಕ್ತಿ ಪ್ರದರ್ಶನಕ್ಕಿರುವ ವಸ್ತುಗಳಲ್ಲ. ಎಲ್ಲರ ಆಚಾರ ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿರುವುದು ನಮ್ಮ ಕರ್ತವ್ಯ. ನಾನು ಅನೇಕ ಬಾರಿ ಕೃಷ್ಣನ ಮಠಕ್ಕೆ ಹಾಗೂ ಕೃಷ್ಣನ ದಿವ್ಯ ಸಾನಿಧ್ಯಕ್ಕೆ ಬಂದಿದ್ದೇನೆ. ಶ್ರೀಗಳು ನನಗೆ ಕೃಷ್ಣನ ವಿಶ್ವರೂಪ ದರ್ಶನ ತೋರಿಸಿದರು. ನಾನು ಬಂಧಿಖಾನೆ ಸಚಿವನಾಗಿದ್ದಾಗಲೂ ನನಗೆ ಮಠದಿಂದ ಆಹ್ವಾನ ಬಂದಿತ್ತು. ಈ ವಿಶ್ವರೂಪ ದರ್ಶನವನ್ನು ನೋಡಿದಾಗ ನನಗೆ ನನ್ನ 50-60 ವರ್ಷಗಳ ಬದುಕಿನ ನೆನಪು ತಲೆಯಲ್ಲಿ ಸುಳಿದವು. ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ನ ತ್ವತ್ಸಮೋಸ್ತ್ಯಾಭ್ಯಧಿಕಃ ಕುತೋನ್ಯೋ ಲೋಕತ್ರಯೇಪ್ಯಪ್ರತಿಮಪ್ರಭಾವ” ಎಂದು ಭಗವದ್ಗೀತೆಯ ಶ್ಲೋಕ ಪಠಿಸಿದರು.

ನಮ್ಮ ಧರ್ಮ ಮನುಷ್ಯನಿಗೆ ಆತ್ಮ ವಿಶ್ವಾಸ ಹೆಚ್ಚಿಸುವ ದಾರಿ. ಈ ವೇದಿಕೆ ಮೇಲೆ ಶ್ರೀಗಳು ಮೂರ್ನಾಲ್ಕು ಪುಸ್ತಕ ನೀಡಿದರು. ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ನೋಡಿದೆ. ಆ ಭಾಷಣದಲ್ಲಿ ಅವರು, ‘ನಾವು ಧರ್ಮಕ್ಕೆ ಅಂಟಿಕೊಂಡಿರಬಾರದು. ಬಂಧಿಸಲ್ಪಡಬಾರದು. ಬದಲಾಗಿ ನಾವು ಬಯಸಿ ಇಚ್ಛಿಸುವ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದಿದ್ದಾರೆ. ನಾನು ಅವರ ಮಾತುಗಳನ್ನು ಒಪ್ಪುತ್ತೇನೆ” ಎಂದು ಹೇಳಿದರು.

“ಧರ್ಮ ಯಾವುದಾದರೂ ತತ್ವವೊಂದೇ. ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ. ದೇವನೊಬ್ಬ ನಾಮ ಹಲವು. ನಾವು ಅನೇಕ ಹೆಸರಿನಲ್ಲಿ ದೇವರನ್ನು ಕರೆಯುತ್ತಿದ್ದೇವೆ. ನಾವು ಶಿವ, ಕೃಷ್ಣನನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾ ಬಂದಿದ್ದೇವೆ. ನಾವು ಕೃಷ್ಣನನ್ನು ಯಾಕೆ ಇಷ್ಟು ಪ್ರೀತಿಯಿಂದ ಒಪ್ಪುತ್ತೇವೆ ಎಂದರೆ ಕೃಷ್ಣ ಒಬ್ಬ ಶಿಕ್ಷಕ, ಮಾರ್ಗದರ್ಶಕ, ಚಿಂತಕ, ರಾಜಕಾರಣಿ, ಪ್ರೇಮಿ, ತತ್ವಜ್ಞಾನಿ” ಎಂದು ತಿಳಿಸಿದರು.

“ನಾವು ಯಶಸ್ಸು ಕಾಣಬೇಕಾದರೆ, ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ, ಕೃಷ್ಣನ ತಂತ್ರ ಕೂಡ ಇರಬೇಕು" ಎಂದು ವೇದಿಕೆಯಲ್ಲಿದ್ದ ಸಂಸದ ಶ್ರೀನಿವಾಸ ಪೂಜಾರಿ ಅವರ ಹೆಸರನ್ನು ಉಲ್ಲೇಖಿಸಿ, "ಯಶಸ್ಸಿನ ಕಥೆಗೆ ಇವೆಲ್ಲವೂ ಬೇಕು” ಎಂದು ಹೇಳಿದರು.

“ಶ್ರೀಗಳು ಮಾತನಾಡುತ್ತಾ ಮಧ್ವಾಚಾರ್ಯರ ಆಚಾರ ವಿಚಾರಗಳನ್ನು ಯುವಕರ ಮೂಲಕ ವಿದೇಶದಲ್ಲಿ ಪಸರಿಸಬೇಕು ಎಂದು ಹೇಳಿದರು. ಆಗ ನನಗೆ ಅಲೆಕ್ಸಾಂಡರ್ ಕಥೆ ನೆನಪಾಯಿತು. ಅಲೆಕ್ಸಾಂಡರ್ ವಿಶ್ವವನ್ನು ಗೆಲ್ಲಬೇಕು ಎಂದು ಭಾರತದತ್ತ ದಾಳಿ ಮಾಡುವ ಮುನ್ನ ತನ್ನ ಗುರು ಅರಿಸ್ಟಾಟಲ್ ಭೇಟಿ ಮಾಡುತ್ತಾನೆ. ಆಗ ಅರಿಸ್ಟಾಟಲ್ ಅವರು ನೀನು ಭಾರತವನ್ನು ಗೆಲ್ಲಬೇಕಾದರೆ, ಅಲ್ಲಿಂದ ರಾಮಾಯಣ ಗ್ರಂಥ, ಭಗವದ್ಗೀತೆ ಕೃತಿ, ಗಂಗಾ ಜಲ, ಕೃಷ್ಣನ ಕೊಳಲು ಹಾಗೂ ಓರ್ವ ತತ್ವಜ್ಞಾನಿ, ಈ ಐದು ವಸ್ತುಗಳನ್ನು ತೆಗೆದುಕೊಂಡು ಬಾ. ಆಗ ನೀನು ಇಡೀ ಭಾರತವನ್ನು ಗೆದ್ದಂತೆ ಎಂದರಂತೆ. ನಮ್ಮ ಸಂಸ್ಕೃತಿಯೇ ಈ ದೇಶದ ಆಸ್ತಿ” ಎಂದು ಹೇಳಿದರು.

“ಕೃಷ್ಣನ ಕೊಳಲು ಒಂದು ಸಣ್ಣ ಬಿದಿರು. ತನ್ನಿಂದ ಇಂತಹ ನಾದ ಹೊರಹೊಮ್ಮುತ್ತದೆ ಎಂದು ಆ ಬಿದಿರಿಗೆ ಗೊತ್ತಿರುತ್ತದೆಯೇ, ಇಲ್ಲ. ಈ ಡೋಲು, ಚಂಡಿಯಲ್ಲಿ ಬಳಸುವುದು ಚರ್ಮವನ್ನು, ಕುರಿಗಳಿಗೆ ತಮ್ಮ ಚರ್ಮದಿಂದ ಇಂತಹ ನಾದ ಬರುತ್ತದೆ ಎಂದು ಗೊತ್ತಿಲ್ಲ. ಈ ನಾದಗಳಿಂದ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದು ಪ್ರಕೃತಿಯ ವಿಸ್ಮಯ” ಎಂದು ಹೇಳಿದರು.

“ನಾವು ದೇವಾಲಯಕ್ಕೆ ಬಂದು ಪ್ರಾರ್ಥನೆ ಮಾಡುತ್ತೇವೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ. ನಾವು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾ ನಮ್ಮ ಕಷ್ಟ ಸುಖಗಳನ್ನು ಭಗವಂತನ ಜೊತೆ ಹಂಚಿಕೊಂಡು ನಾವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದೇವೆ. ಮನುಷ್ಯನಿಗೆ ಸೋಲು, ಗೆಲುವು ಯಾವುದೂ ಶಾಶ್ವತವಲ್ಲ. ಡಿವಿಜಿ ಅವರ ಕಗ್ಗದಲ್ಲಿ ಈ ಜಗವೆಂಬ ಗುಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಾಧನೆ ಮಾಡುವ ಸಾಮರ್ಥ್ಯವಿರುತ್ತದೆ. ಹೀಗಾಗಿ ಈ ಪ್ರಪಂಚದಲ್ಲಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ” ಎಂದು ತಿಳಿಸಿದರು.

“ದಾರಿ ಇದ್ದಲ್ಲಿ ನಾವು ನಡೆಯಬೇಕು, ದಾರಿ ಇಲ್ಲದಿದ್ದರೆ, ದಾರಿಯನ್ನು ಹುಡುಕಿಕೊಂಡು ಹೋಗಬೇಕು. ನಮ್ಮ ಜೀವನದಲ್ಲಿ ಮರಳಿ ಬರದೇ ಇರುವ ವಸ್ತುಗಳು ಎಂದರೆ, ಸಮಯ, ಮಾತು, ನಂಬಿಕೆ ಹಾಗೂ ಅವಕಾಶ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಆದರೆ ಅವಕಾಶ ಮಾತ್ರ ನೀಡುತ್ತಾನೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ನಾವು ಇಂದು ಮಧ್ವಾಚಾರ್ಯರ ಆದರ್ಶ, ಮಾರ್ಗದರ್ಶನದಿಂದ ನಾವು ಇಂದು ಅವರ ಆಚಾರ ವಿಚಾರ ಸ್ಮರಿಸುತ್ತಿದ್ದೇವೆ. ಗುರುವಿನಲ್ಲಿ ನಾವು ಗುರಿ ಕಾಣಬಹುದು. ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನಸಂಪದ, ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ ಎಂಬ ಶ್ಲೋಕದ ಮೂಲಕ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿದ್ದೇವೆ” ಎಂದು ತಿಳಿಸಿದ್ದೇವೆ.

“ಉಡುಪಿಗೆ ಬಂದು ಶ್ರೀಗಳ 64ನೇ ಜನ್ಮ ನಕ್ಷತ್ರೋತ್ಸವದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಂತೋಷವಾಗಿದೆ. ಶ್ರೀಗಳು ನನಗೆ ಬಹಳ ಅಕ್ಕರೆಯಿಂದ ಆಶೀರ್ವಾದ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ” ಎಂದು ತಿಳಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions