Advertisement

ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಭಾರತ ದೇಶ ಹಳ್ಳಿಗಳ ದೇಶ, ಗ್ರಾಮಗಳು ಅಭಿವೃದ್ಧಿಯಾದರೆ, ದೇಶ ಅಭಿವೃದ್ಧಿಯಾದಂತೆ. ಗ್ರಾಮಗಳ ವಿಕಸನವೇ ರಾಜೀವ್ ಗಾಂಧಿ ಅವರ ಕನಸಾಗಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್, ಕಾಪು ತಾಲೂಕು ಪಂಚಾಯತ್ ವತಿಯಿಂದ ಮಜೂರು ಗ್ರಾಮ ಪಂಚಾಯತ್ ನ ನವೀಕೃತ ಸಭಾ ಭವನದ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಮಾಡಬಾರದು, ‌ಇದಕ್ಕಾಗಿಯೇ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ‌ಪಕ್ಷಗಳ ಚಿಹ್ನೆ ಇರುವುದಿಲ್ಲ ಎಂದರು.

ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳ ಹೊಣೆಗಾರಿಕೆ ಅತ್ಯಂತ ಪ್ರಮುಖವಾದದ್ದು. ಇದು ಪರಿಣಾಮಕಾರಿ ಆಡಳಿತ, ಸಮುದಾಯದ ಸಹಭಾಗಿತ್ವ ಮತ್ತು ಸುಸ್ಥಿರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದರು. ಗ್ರಾಮಗಳು ಸಬಲೀಕರಣಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಸಹ ಪಂಚಾಯಿತಿ ವ್ಯವಸ್ಥೆಗೆ ಬಲ ತುಂಬಲಾಯಿತು. ನರೇಗಾ ಯೋಜನೆ ಬಂದ ನಂತರ ಗ್ರಾಮ ಪಂಚಾಯಿತಿಗಳ ಬಲವರ್ಧನೆಯಾಗಿದೆ. ಬೀದಿ ದೀಪಗಳ ಬಿಲ್ ತುಂಬುವ ಶಕ್ತಿಯೂ ಇಲ್ಲದ ಪಂಚಾಯಿತಿಗಳು ಇಂದು ಸಾಕಷ್ಟು ಅನುದಾನ ಪಡೆಯುತ್ತಿವೆ ಎಂದರು.

ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಅತ್ಯಂತ ಮಹತ್ವದ್ದು. ಈ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಗೆ ಯಾವುದೇ ಕೆಲಸ ಅರಸಿ ಬರುವವರ ಸಂಖ್ಯೆ ತುಂಬಾ ಕಡಿಮೆಯಾಗಿತ್ತು. ಆದರೆ, ಈಗ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದಲೇ ಕೋಟ್ಯಾಂತರ ರೂಪಾಯಿಗಳ ಕಾಮಗಾರಿಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದರು.

ಸಮಾರಂಭದಲ್ಲಿ ಉಡುಪಿ-ಚಿಕ್ಕಮಗಳೂರು‌ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ‌ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಉಪ ವಿಭಾಗಧಿಕಾರಿ ರಶ್ಮಿ, ತಹಶಿಲ್ದಾರ್ ಡಾ.ಪ್ರತಿಭಾ, ತಾಲೂಕು ಪಂಚಾಯತ್ ಸಿಇಒ ಜೇಮ್ಸ್ವಡಿ'ಸಿಲ್ವ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಳದೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions