ಜೈನ ಸಮಾಜ ಹಾಗೂ ಸಮಾಜದ ರಾಜರನ್ನು ಅವಹೇಳನಕಾರಿ ಹಾಗೂ ಅಪಪ್ರಚಾರ ಮಾಡುತ್ತಿದ್ದು, ಇದನ್ನು ವಿರೋಧಿಸಿ ಸಮಾಜ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದೆ̤ ಸರಕಾರ ಹಾಗೂ ಎಸ್ಐಟಿ ತನಿಖೆ ಮೇಲೆ ಯಾವುದೇ ಅನುಮಾನಗಳಿಲ್ಲ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ. ಆದರೆ ಕೆಲವರು ಧರ್ಮಸ್ಥಳ ಕ್ಷೇತ್ರ ಹಾಗೂ ಡಾ.ವೀರೇಂದ್ರ ಹೆಗ್ಗಡೆ ಅವರ ಮೇಲೆ ವಿನಾಕಾರಣ ಆರೋಪ, ಅವಹೇಳನಕಾರಿಯಾಗಿ ಮಾತನಾಡುವ ಕೆಲಸ ಆಗುತ್ತಿದೆ. ಇದನ್ನು ಇಡೀ ಸಮಾಜವು ಖಂಡಿಸುತ್ತದೆ. ಅವರು ಒಂದೇ ಒಂದು ಕೊಲೆ ಮಾಡಿದ್ದಾರೆ ಎಂದು ಬಂದರೆ ನಾನು ಸನ್ಯಾಸತ್ವ ತಿರಸ್ಕಾರ ಮಾಡುತ್ತೇನೆ ಎಂದು ವರೂರು ನವಗ್ರತೀರ್ಥ ಆಚಾರ್ಯ ಗುಣಧರನಂದಿ ಮಹಾರಾಜ ಸ್ವಾಮೀಜಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಜೈನ ಸಮಾಜ ಹಾಗೂ ಸಮಾಜದ ರಾಜರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ನೋವನ್ನುಂಟು ಮಾಡಿದೆ. ಅಹಿಂಸೆ ಪರಿಪಾಲನಾ ಸಮಾಜದ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇದನ್ನು ವಿರೋಧಿಸಿ ಹೋರಾಟಕ್ಕೆ ಮುಂದಾಗಿದ್ದು, ಆ.5 ರಂದು ಹುಬ್ಬಳ್ಳಿ ಮಟ್ಟದ ಹಾಗೂ ಆ.10 ರಂದು ರಾಜ್ಯಮಟ್ಟದ ಸಮಾಜ ಪ್ರಮುಖರ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು. ಸಮಾಜಮುಖಿ ವ್ಯಕ್ತಿಯ ವಿರುದ್ಧ ಮಾತನಾಡುವುದನ್ನು ಸಹಿಸಿಕೊಳ್ಳುವುದಿಲ್ಲ. ಸರಕಾರ ಎಸ್ಐಟಿ ತನಿಖೆಯನ್ನು ತ್ವರಿತವಾಗಿ ಮುಗಿಸಿ ವರದಿ ಬಿಡುಗಡೆ ಮಾಡಬೇಕು ಎಂದರು.
ತಲೆಬುರುಡೆ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದನ್ನು ಮುಂದಿಟ್ಟುಕೊಂಡು ವೀರೇಂದ್ರ ಹೆಗ್ಗಡೆ ಹಾಗೂ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಹಾಗೂ ಕ್ಷೇತ್ರದ ಏಳಿಗೆ ಸಹಿದವರು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ. ಜೈನ ಸಮುದಾಯದವರು ಹಿಂದೂ ದೇವಸ್ಥಾನದ ಮುಖ್ಯಸ್ಥರಾಗಿದ್ದಾರೆ ಎಂಬುವುದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಯಾವುದೇ ಸಾಕ್ಷಾಧಾರಗಳಿಲ್ಲದೆ ಮಾತನಾಡುವುದನ್ನು ಖಂಡಿಸುತ್ತೇವೆ. ತನಿಖೆ ಹಾಗೂ ವರದಿ ನಂತರ ಕ್ಷೇತ್ರಕ್ಕೆ ಅಂಟಿಸಲು ಪ್ರಯತ್ನಿಸುತ್ತಿರುವ ಕಳಂಕ ಹಾಗೂ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಕಾರ್ಯಕ್ರಮ ಹಾಗೂ ಹೋರಾಟ ಮಾಡಲಾಗುವುದು ಎಂದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions