ಉಡುಪಿ: "ನನ್ನ ವಿರುದ್ಧ ಯಾವುದೇ ವಂಚನೆ ಪ್ರಕರಣದಲ್ಲಿ ಬಂಧನ ನಡೆದಿಲ್ಲ. ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಆರೋಗ್ಯದ ಕಾರಣದಿಂದ ಜಾಮೀನು ಪಡೆದಿಲ್ಲ. ನಾನು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದೂ ಇಲ್ಲ. ಉಡುಪಿ ಜಿಲ್ಲಾ ಗ್ರಾಹಕರ ಆಯೋಗ ನೀಡಿದ್ದ ಆದೇಶವನ್ನು ಕರ್ನಾಟಕ ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ನನ್ನ ಬಿಡುಗಡೆ ನಡೆದಿದೆ" ಎಂದು ಶ್ರೀ ಲಕ್ಷ್ಮೀ ಹೋಮ್ಸ್ & ಇನ್ಫ್ರಾಸ್ಟ್ರಕ್ಚರ್ಸ್ ಸಂಸ್ಥೆಯ ಮಾಲೀಕ ಅಮೃತ್ ಶೈಣೈ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮ್ಮ ಸಂಸ್ಥೆಯು ಹಲವು ಕಟ್ಟಡ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಅನೇಕ ತೃಪ್ತ ಗ್ರಾಹಕರನ್ನು ಹೊಂದಿದೆ. ಆದರೆ ಒಂದು ಯೋಜನೆ ಮರಳಿನ ಕೊರತೆ, ಬ್ಯಾಂಕ್ ಸಾಲದ ಒತ್ತಡ ಹಾಗೂ ಕೋವಿಡ್-19ರಿಂದ ಉಂಟಾದ ಆರ್ಥಿಕ ಸಂಕಷ್ಟದ ಪರಿಣಾಮ ವಿಳಂಬಗೊಂಡಿತು ಎಂದು ತಿಳಿಸಿದ್ದಾರೆ.
ಯೋಜನೆ ವಿಳಂಬವಾದ ಹಿನ್ನೆಲೆಯಲ್ಲಿ 2023ರಲ್ಲಿ ಕೆಲವು ಗ್ರಾಹಕರು ಸಿವಿಲ್ ನ್ಯಾಯಾಲಯ ಹಾಗೂ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಇದೇ ವೇಳೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಪಡೆದಿದ್ದ ಕೆಲವು ಖಾಸಗಿ ಸಾಲಗಳಿಗೆ ಸಂಬಂಧಿಸಿದ ಪ್ರಕರಣಗಳೂ ನ್ಯಾಯಾಲಯದ ಮೆಟ್ಟಿಲೇರಿದ್ದವು ಎಂದು ಹೇಳಿದ್ದಾರೆ.
ನಂತರ ತಮ್ಮಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂಬುದು ಮನವರಿಕೆಯಾದ ಹಿನ್ನೆಲೆಯಲ್ಲಿ ಅನೇಕ ದೂರುದಾರರು ರಾಜಿ ಮಾಡಿಕೊಂಡಿದ್ದು, ಸುಮಾರು 90 ಶೇಕಡಾ ಪ್ರಕರಣಗಳು ಇತ್ಯರ್ಥಗೊಂಡಿವೆ. ಬ್ಯಾಂಕ್ ಸಾಲದ ಸಮಸ್ಯೆಯನ್ನೂ ಪರಿಹರಿಸುವ ಹಂತದಲ್ಲಿದ್ದಾಗ ಉಡುಪಿ ಜಿಲ್ಲಾ ಗ್ರಾಹಕರ ಆಯೋಗ ಒಂದು ಪ್ರಕರಣದಲ್ಲಿ ಆದೇಶ ನೀಡಿದ್ದು, ಅದನ್ನು ಪ್ರಶ್ನಿಸಿ ರಾಜ್ಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಆಯೋಗವು ಪ್ರಾಥಮಿಕ ಹಂತದಲ್ಲೇ ಜಿಲ್ಲಾ ಆಯೋಗದ ಆದೇಶದ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿ, ಹಲವು ಪ್ರಮುಖ ಅಭಿಪ್ರಾಯಗಳನ್ನು ದಾಖಲಿಸಿದೆ. ಸಂಬಂಧಿಸಿದ ಆದೇಶದ ಪ್ರತಿಯೂ ತಮ್ಮ ಬಳಿ ಲಭ್ಯವಿದ್ದು, ಅಗತ್ಯವಿದ್ದರೆ ಅದರ ಕನ್ನಡ ವಿವರಣೆಯನ್ನು ನೀಡಲು ಸಿದ್ಧವಿದ್ದೇನೆ ಎಂದು ಅಮೃತ್ ಶೈಣೈ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಕಷ್ಟದ ಸಮಯದಲ್ಲಿ ತಮ್ಮ ಹಾಗೂ ಕುಟುಂಬದೊಂದಿಗೆ ನಿಂತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸ್ನೇಹಿತರು, ವಕೀಲ ಶ್ರೀಧರ್ ಎಸ್. ಭಟ್ ಹಾಗೂ ಅವರ ತಂಡಕ್ಕೆ, ಜೊತೆಗೆ ಸ್ಯೂರಿಟಿ ನೀಡಲು ಮುಂದೆ ಬಂದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ತಮ್ಮ ವಿರುದ್ಧ ತಪ್ಪು ಮಾಹಿತಿ ಪ್ರಸಾರ ಮಾಡಿದ ಮಾಧ್ಯಮಗಳು ಈ ಸ್ಪಷ್ಟೀಕರಣವನ್ನು ಪರಿಗಣಿಸಿ ವಾಸ್ತವಾಂಶಾಧಾರಿತ ವರದಿ ಪ್ರಕಟಿಸಬೇಕು ಎಂದು ಅಮೃತ್ ಶೈಣೈ ಮನವಿ ಮಾಡಿದ್ದಾರೆ. ಕಾನೂನು ಹೋರಾಟ ಮುಂದುವರಿಯಲಿದ್ದು, ನ್ಯಾಯದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions