Advertisement

ಮನುವಾದದ ಅಣಿಮುತ್ತುಗಳು ಯತ್ನಾಳ್‌ರ ಬಾಯಿಯಿಂದ ಉದುರಿವೆ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು : "ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ ಎಂದು ಸಿದ್ದರಾಮಯ್ಯನವರು ಹೇಳಿದಾಗ ಬಾಯಿ ಬಡಿದುಕೊಂಡಿದ್ದ ಬಿಜೆಪಿ ನಾಯಕರು ಯತ್ನಾಳ್‌ರ ಮಾತಿಗೆ ಮೌನವಾಗಿರುವುದೇಕೆ?. ಬಿಜೆಪಿ ನಾಯಕರ ಕಣ್ಣು, ಕಿವಿ, ಬಾಯಿಗಳಿಗೆ ಬೀಗ ಹಾಕಿಕೊಂಡಿರುವುದೇಕೆ?" ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ಯತ್ನಾಳ್ ಅವರು "ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡೋರು ಸನಾತನ ಧರ್ಮದ ಮಹಿಳೆಯೇ ಆಗಿರಬೇಕು, ಸಾಮಾನ್ಯ ದಲಿತ ಮಹಿಳೆಗೂ ಹಾಕಲಿಕ್ಕೆ ಅಧಿಕಾರ ಇಲ್ಲ" ಎಂದು ಹೇಳಿದ್ದಾರೆ. ಮನುವಾದದ ಅಣಿಮುತ್ತುಗಳು ಯತ್ನಾಳ್‌ರ ಬಾಯಿಯಿಂದ ಉದುರಿವೆ, ಇದು ಯತ್ನಾಳ್‌ರ ಮಾತುಗಳಷ್ಟೇ ಅಲ್ಲ ಆರೆಸ್ಸೆಸ್‌ ಅಂತರಂಗದ ಧೋರಣೆ ಎಂದು ಹೇಳಿದ್ದಾರೆ.

ದಲಿತರಿಗೆ ಪುಷ್ಪಾರ್ಚನೆಗೆ ಅಧಿಕಾರವಿಲ್ಲ, ದಲಿತರಿಗೆ ನೀರು ಕುಡಿಯುವ ಅಧಿಕಾರವಿಲ್ಲ, ದಲಿತರಿಗೆ ಆಡಳಿತದ ಅಧಿಕಾರವಿಲ್ಲ, ದಲಿತರಿಗೆ ಶಿಕ್ಷಣ ಪಡೆಯುವ ಅಧಿಕಾರವಿಲ್ಲ, ದಲಿತರಿಗೆ ವ್ಯವಹಾರ ನಡೆಸುವ ಅಧಿಕಾರವಿಲ್ಲ, ದಲಿತರಿಗೆ ಬದುಕುವ ಅಧಿಕಾರವೂ ಇಲ್ಲ. ಇದು ಮನುವಾದಿಗಳ ಅಂತರಂಗ, ಬಹಿರಂಗ ಎಲ್ಲವೂ ಎಂದು ಆಕ್ರೋಶ ಹೊರಹಾಕಿದ್ದಾರೆ.

ದಲಿತರು ಹಿಂದೂ ಧರ್ಮದ ವ್ಯಾಪ್ತಿಯೊಳಗಿಲ್ಲವೇ?, ಇದೇ ಧೋರಣೆಯಿಂದಲೇ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮುರವರನ್ನು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ಹೊರಗಿಟ್ಟಿದ್ದಲ್ಲವೇ? ಇದೇ ಧೋರಣೆಯಿಂದಲೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೇವಾಲಯದ ಪ್ರವೇಶಕ್ಕೆ ನಿರಾಕರಿಸಿದ್ದಲ್ಲವೇ?. ಈ ಶೋಷಣೆಯ ಧೋರಣೆಗಾಗಿಯೇ ಅಲ್ಲವೇ ಬಾಬಾ ಸಾಹೇಬರು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದಿದ್ದು? ಎಂದು ಕೇಳಿದ್ದಾರೆ.

ಬಾಬಾ ಸಾಹೇಬರ ಸಂವಿಧಾನದ ಕಾಲಘಟ್ಟದಲ್ಲೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ದಲಿತರ ಬಗ್ಗೆ ಈ ಪರಿ ತಿರಸ್ಕಾರವಿರುವಾಗ ಹಿಂದಿನ ವ್ಯವಸ್ಥೆ ದಲಿತರೆಡೆಗೆ ಇನ್ನೆಷ್ಟರ ಮಟ್ಟಿಗೆ ಕ್ರೂರವಾಗಿದ್ದಿರಬಹುದು. ಸಾಮಾಜಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಬಣ್ಣ ಲೇಪಿಸಿ ಒಂದು ವರ್ಗದ ಮನುಷ್ಯರನ್ನು ನಿಷ್ಕೃಷ್ಟವಾಗಿ ಕಾಣುತ್ತಿರುವಾಗ ಹಿಂದೂ ಧರ್ಮದಲ್ಲಿ ಯಾವ ಶ್ರೇಷ್ಠತೆಯನ್ನು ಹುಡುಕುತ್ತೀರಿ? ದಲಿತರನ್ನು ಹೊರಗಿಟ್ಟು ಅದ್ಯಾವ ಬಾಯಿಯಲ್ಲಿ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎನ್ನುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions