ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ನಿವಾಸಿ ಅಜಿತ್ ಕುಮಾರ್ ಶೆಟ್ಟಿ (32) ಅವರು ನೀಡಿದ ದೂರಿನ ಆಧಾರದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರ ಪ್ರಕಾರ, ಅವರು ತಮ್ಮ ಪಟ್ಟಾ ಜಾಗದ 78 ಸೆಂಟ್ಸ್ ಪ್ರದೇಶದಲ್ಲಿ ಗಣಿ ಇಲಾಖೆಯಿಂದ ಕಾನೂನುಬದ್ದ ಪರವಾನಿಗೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳ NOCಗಳನ್ನು ಪಡೆದು ಟಿಪ್ಪರ್ ಮೂಲಕ ಕುಂದಾಪುರ ಭಾಗದ ಹಂಚಿನ ಕಾರ್ಖಾನೆಗಳಿಗೆ ಮಣ್ಣು ಸರಬರಾಜು ಮಾಡುತ್ತಿದ್ದರು.
ಈ ವೇಳೆ, ಮೊದಲ ಆರೋಪಿ ರಮೇಶ್ ತೆಂಕನಿಡಿಯೂರು ಎಂದು ಪರಿಚಯಿಸಿಕೊಂಡ ವ್ಯಕ್ತಿ, ಏಪ್ರಿಲ್ 10, 2026 ರಂದು ಬೆಳಿಗ್ಗೆ ಉಡುಪಿ ತಹಶೀಲ್ದಾರ್ ಕಚೇರಿಗೆ ಹಾಜರಾಗುವಂತೆ ತಿಳಿಸಿ, ವಿವಿಧ ಅಧಿಕಾರಿಗಳಿಗೆ ಹಣ ನೀಡಬೇಕೆಂದು ಹೇಳಿ ₹2.25 ಲಕ್ಷ ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಹಣ ನೀಡಿದಲ್ಲಿ ಒಂದು ತಿಂಗಳು ವ್ಯವಹಾರ ಮಾಡಲು ಅವಕಾಶ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾನೆ.
ಇದಾದ ಬಳಿಕ, ಎರಡನೇ ಆರೋಪಿ “News Next” ವೆಬ್ ಚಾನೆಲ್ ಮೂಲಕ ಪಿರ್ಯಾದಿದಾರರ ವಿರುದ್ಧ ಅಕ್ರಮ ಮಣ್ಣು ಸಾಗಾಟದ ಆರೋಪ ಪ್ರಸಾರ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಅದೇ ದಿನ, ಪಿರ್ಯಾದಿದಾರರು ಮನೆಗೆ ತೆರಳುವ ವೇಳೆ ಬನ್ನಾಡಿ ಗರಡಿ ರಸ್ತೆಯಲ್ಲಿ ಮೂರನೇ ಮತ್ತು ನಾಲ್ಕನೇ ಆರೋಪಿಗಳಾದ ಅಶೋಕ್ ಶೆಟ್ಟಿ ಹಾಗೂ ವಿಜಯ ಶೆಟ್ಟಿ ಅವರು ಕಾರನ್ನು ಅಡ್ಡಗಟ್ಟಿ, ನ್ಯೂಸ್ ಹಾಗೂ ವಾಟ್ಸ್ಅಪ್ ಗ್ರೂಪ್‌ಗಳಲ್ಲಿ ಮಾಹಿತಿ ಹಂಚಿರುವುದಾಗಿ ಹೇಳಿ ₹2 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನಷ್ಟು, ಮೂರನೇ ಆರೋಪಿ ಸಾರ್ವಜನಿಕರ ನಕಲಿ ಸಹಿಗಳನ್ನು ಬಳಸಿ ತಪ್ಪು ಅರ್ಜಿಗಳನ್ನು ಸಲ್ಲಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2) ಮತ್ತು 308(2) ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions