ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲ್ಪಟ್ಟ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025’ಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸೋಮವಾರದಂದು ರಾಜ್ಯ ಸರಕಾರವು ರಾಜ್ಯಪತ್ರ ಹೊರಡಿಸಿದೆ.
ಈ ಕಾನೂನಿನ ಅನ್ವಯ ಸಾಮಾಜಿಕ ಬಹಿಷ್ಕಾರ ವಿಧಿಸುವುದಕ್ಕಾಗಿ ಸಭೆ ಸೇರುವುದು ನಿಷೇಧವಾಗಿದೆ. ಒಂದು ವೇಳೆ ಸಾಮಾಜಿಕ ಬಹಿಷ್ಕಾರವನ್ನು ವಿಧಿಸುವ ವಿಷಯದ ಮೇಲೆ ಸಂಘಟಿಸಿರುವ ಸಭೆಯಲ್ಲಿ ಭಾಗವಹಿಸಿರುವ ಪ್ರತಿ ಸದಸ್ಯನು ಒಂದು ಲಕ್ಷ ರೂಪಾಯಿಗಳಿಗೆ ದಂಡವನ್ನು ಪಾವತಿ ಮಾಡಬೇಕು. ಅಲ್ಲದೆ, ಈ ಅಪರಾಧ ಮಾಡಲು ನೆರವು ಅಥವಾ ಪ್ರೇರಣೆ ನೀಡಿದ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ.ಗಳ ದಂಡ ಅಥವಾ ಇವೆರಡನ್ನು ವಿಧಿಸಬಹುದಾಗಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಸಾಮಾಜಿಕ ಬಹಿಷ್ಕಾರದ ಅಮಾನವೀಯ ಪದ್ಧತಿಯು ಇನ್ನೂ ಜೀವಾಂತವಾಗಿದೆ. ಈ ಪಿಡುಗನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಈಗಾಗಲೇ ಇರುವ ಕಾನೂನುಗಳು ಪರಿಣಾಮಕಾರಿಯಲ್ಲ ಎಂದು ಸಾಬೀತಾಗಿದೆ. ಹೀಗಾಗಿ ಕಾನೂನನನ್ನು ತರಲಾಗಿದೆ ಎಂದು ಸರಕಾರವು ರಾಜ್ಯಪತ್ರದಲ್ಲಿ ಹೇಳಿದೆ.
ನೈತಿಕತೆ, ಸಾಮಾಜಿಕ ಸ್ವೀಕಾರ, ರಾಜಕೀಯ ಒಲವು, ಲಿಂಗತ್ವ ಅಥವಾ ಯಾವುದೇ ಇತರ ಆಧಾರದ ಮೇಲೆ ಸಮುದಾಯದ ಸದಸ್ಯರ ನಡುವೆ ತಾರತಮ್ಯವನ್ನು ಉಂಟುಮಾಡುವುದು, ಸಮಾಜದಿಂದ ದೂರವಿರಿಸುವುದು ಅಥವಾ ತಿರಸ್ಕರಿಸುವುದು ಅಥವಾ ಸಾಮಾಜಿಕ ಅಥವಾ ವ್ಯಾವಹಾರಿಕ ಬಂಧಗಳನ್ನು ಕಡಿಯುವುದು ಸಾಮಾಜಿಕ ಬಹಿಷ್ಕಾರವಾಗಿರುತ್ತದೆ.
ಸಾಮಾಜಿಕ ಬಹಿಷ್ಕಾರದ ಸಂತ್ರಸ್ತರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 3(5), 61(1), 61(2), 190, 196, 308(1) ರಿಂದ (6) ಮತ್ತು 62ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು. ದೂರನ್ನು ಸ್ವೀಕರಿಸಿದ ಮೇಲೆ, ಇನ್ಸ್ ಪೆಕ್ಟರ್ ದರ್ಜೆಗಿಂತ ಕಡಿಮೆಯಲ್ಲದ ಪೊಲೀಸ್ ಅಧಿಕಾರಿಯು ಸ್ವಪ್ರೇರಿತ ಕ್ರಮವನ್ನು ಕೈಗೊಳ್ಳಬಹುದು ಎಂದು ಈ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions