ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕುಂದಾಪುರ ಮತ್ತು ಬೈಂದೂರು ತಾಲೂಕು ಘಟಕದ ವತಿಯಿಂದ ಬೈಂದೂರು ಆಸ್ಪತ್ರೆಗೆ ಬರುವ ರೋಗಿಗಳ ಅನುಕೂಲವಾಗುವಂತೆ ಆಸೀನರಾಗಲು ಕುರ್ಚಿಗಳು ಮತ್ತು ಸ್ಟ್ರಕ್ಚರ್ ಟ್ರೋಲಿ ಹಸ್ತಾಂತರಿಸಲಾಯಿತು ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
'ನಮ್ಮ ಆಸ್ಪತ್ರೆಗೆ ದಿನ ನಿತ್ಯ ಹಲವಾರು ರೋಗಿಗಳು ಸುತ್ತಮುತ್ತಲಿನ ಹಳ್ಳಿಗಳಿಂದ ಭೇಟಿ ನೀಡುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳ ಕೊರತೆ ಇದೆ. ದಾನಿಗಳು ನಮ್ಮೊಂದಿಗೆ ಕೈ ಜೋಡಿಸಿದರೆ ಆಸ್ಪತ್ರೆಯಲ್ಲಿ ಇನ್ನೂ ಉತ್ತಮ ರೀತಿಯ ಸೇವೆಗಳು ಒದಗಿಸುವಲ್ಲಿ ಸಹಾಯ ವಾಗಲಿದೆ. ಈಗಾಗಲೇ ಬೈಂದೂರು ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದೆ, ಆದರೆ ನಮ್ಮ ಆಸ್ಪತ್ರೆ ಇನ್ನೂ ತಾಲೂಕು ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲಾಗಿಲ್ಲ, ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ, ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ' ಎಂದು ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್. ಸಿ. ಸೌಕೂರ್ ಹೇಳಿದರು. ಅವರು ಸರಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಬಟ್ವಾಡಿ ಸಂಸ್ಥೆಯ ಈ ಮಹತ್ಕಾರ್ಯವನ್ನು ಪ್ರಶಂಸಿಸುತ್ತಾ 'ಇಲ್ಲಿ ಎಲ್ಲಾ ಜಾತಿ ಮತ್ತು ಸಮುದಾಯದ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ, ಇಲ್ಲಿನ ವೈದ್ಯರುಗಳು ಮತ್ತು ಸಿಬ್ಬಂದಿಗಳು ರೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಾರೆ ಮತ್ತು ಚಿಕಿತ್ಸೆ ನೀಡುತ್ತಾರೆ, ನಿಮ್ಮ ಈ ದೇಣಿಗೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.' ಎಂದು ಹೇಳಿದರು.
ಬೈಂದೂರು ವಕೀಲರ ಸಂಘದ ಅಧ್ಯಕ್ಷರಾದ ಮೊಬಿ ಪಿ.ಸಿ. ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸುತ್ತಾ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಫಯಾಜ್ ಅಲಿ ಬೈಂದೂರು, ಖಿದ್ಮಾ ಫೌಂಡೇಶನ್ ನ ಉಪಾಧ್ಯಕ್ಷರಾದ ಮುಹಮ್ಮದ್ ಹಾರಿಸ್ ಗೋಳಿಹೊಳೆ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಫಾರ್ಮಸಿ ಅಧಿಕಾರಿ ಅಶ್ಫಾಕ್ ನಾಗೂರು, ಸದಸ್ಯರಾದ ಬೇದ್ರೆ ಇಬ್ರಾಹಿಂ ಕುಂದಾಪುರ, ಅಬ್ದುಲ್ ರಹ್ಮಾನ್ ಶೀರೂರು, ರಿಜ್ವಾನ್ ನಾಗೂರು, ಅಸ್ಲಮ್ ತಲ್ಲೂರು, ಇರ್ಫಾನ್ ನಾಗೂರು, ಹಸನ್ ಶಬ್ಬರ್ ಶೀರೂರು, ಜಲಾಲ್ ಶೇಖ್ ಕಂಡ್ಲೂರು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಶೇಖ್ ಅಬು ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions