ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ (ರಿ.)ದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್ ಮತ್ತು ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗಳು ಈ ವರ್ಷ ಒಟ್ಟಿಗೆ ಮೂಡಬಿದಿರೆಯಲ್ಲಿ ನಡೆಯಲಿದ್ದು, ಜ.6,ರಿಂದ 10 ,2027 ರವರೆಗೆ 5,ದಿನಗಳ ಕಾಲ ನಿಗದಿಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿ ಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಆಳ್ವಾಸ್ ನುಡಿಸಿರಿ ಪರಿಕಲ್ಪನೆ -‘ಕನ್ನಡ ಮನಸ್ಸು : ಭವಿಷ್ಯದ ಕನಸು’. ಪರಿಕಲ್ಪನೆಯೊಂದಿಗೆ ಜ.7,2027 ರ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡು ಜ.9ರ (3 ದಿನಗಳು) ಶನಿವಾರ ಸಂಜೆ ಸಮಾಪನಗೊಳ್ಳಲಿದೆ.
ಆಳ್ವಾಸ್ ನುಡಿಸಿರಿ 2027 ಯುವ ಜನತೆಯನ್ನು ಕೇಂದ್ರವಾಗಿಸಿರುವ ಪರಿಕಲ್ಪನೆಯಾಗಿದೆ. ಬದಲಾಗುತ್ತಿರುವ ಸಮಾಜದಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿಗಳನ್ನೊಳಗೊಂಡ ಕನ್ನಡದ ಅಸ್ಮಿತೆಯಿಂದ ಕರ್ನಾಟಕದ ಭವಿಷ್ಯವನ್ನು ಕಟ್ಟುವ ಸಂಕಲ್ಪ ಈ ಪರಿಕಲ್ಪನೆಯದ್ದಾಗಿದೆ.
ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ ಪ್ರಮುಖ ವಿಮರ್ಶಕರಾಗಿರುತ್ತಾರೆ. ಆಳ್ವಾಸ್ ನುಡಿಸಿರಿ 2027ರ ಉದ್ಘಾಟಕರಾಗಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಆಗಮಿಸಲಿದ್ದಾರೆ.
ಜ.6;ಆಳ್ವಾಸ್ ವಿರಾಸತ್‌ಗೆ ಭವ್ಯ ಚಾಲನೆ:-
ಆಳ್ವಾಸ್ ವಿರಾಸತ್ 2027ರ ಉದ್ಘಾಟನಾ ಸಮಾರಂಭ ಜನವರಿ 6ರಂದು ಸಂಜೆ ವೈಭವಪೂರ್ಣವಾಗಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಾಸ್ತ್ರೀಯ ಹಾಗೂ ಜನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಇಬ್ಬರು ಸಾಧಕರಿಗೆ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು.
ಜನವರಿ 6ರಿಂದ ಪ್ರತಿದಿನ ಸಂಜೆ 6 ಗಂಟೆಯಿಂದ 10 ಘಂಟೆಯವರೆಗೆ ಆಳ್ವಾಸ್ ವಿರಾಸತ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಗೀತ, ನೃತ್ಯ, ಶಾಸ್ತ್ರೀಯ ಹಾಗೂ ಜಾನಪದ ಕಲಾ ಪ್ರಕಾರಗಳ ವೈವಿಧ್ಯ ಮಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ. ಭಾರತೀಯ ಕಲಾ–ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ವಿರಾಸತ್‌ನ ಪ್ರತಿಯೊಂದು ಸಂಜೆಯೂ ಸಾಂಸ್ಕೃತಿಕ ಸಂಭ್ರಮದ ಅನುಭವವನ್ನು ನೀಡಲಿದೆ ಎಂದು ಡಾ.ಮೋಹನ್ ಆಳ್ವ ತಿಳಿಸಿದ್ದಾರೆ.
*ಹಸಿರು ಸಂವಾದ: -50 ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆಯ ಹೊಸ ಮಾದರಿ
ಆಳ್ವಾಸ್ ನುಡಿಸಿರಿ–ವಿರಾಸತ್ 2027ರ ಅಂಗವಾಗಿ ಜನವರಿ 6 ಮತ್ತು 7ರಂದು ‘ಹಸಿರು ಸಂವಾದ’ ರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದೆ. ಕರಾವಳಿ ಪರಿಸರ ಸಂರಕ್ಷಣೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಹಾಗೂ ಸಮುದಾಯದ ಸಹಭಾಗಿತ್ವದ ಮೂಲಕ ಸುಸ್ಥಿರ ಪರಿಸರ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮದಲ್ಲಿ 800ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.
ತ್ಯಾಜ್ಯವು ನದಿಗಳ ಮೂಲಕ ಸಮುದ್ರ ಸೇರುವುದನ್ನು ತಡೆಯುವ ಉದ್ದೇಶದಿಂದ ಪಾವಂಜೆ (ಗುರುಪುರ), ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 50ಕ್ಕೂ ಅಧಿಕ ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾ ಗಿದೆ. ಈ ಗ್ರಾಮಗಳಲ್ಲಿ ತ್ಯಾಜ್ಯ ವಿಂಗಡಣೆ, ಸಂಗ್ರಹ, ವೈಜ್ಞಾನಿಕ ಸಂಸ್ಕರಣೆ ಹಾಗೂ ಮರುಬಳಕೆಗೆ ಗ್ರಾಮಮಟ್ಟ ದಲ್ಲಿಯೇ ವ್ಯವಸ್ಥೆ ರೂಪಿಸುವ ಮೂಲಕ ಪರಿಣಾಮಕಾರಿ ಮತ್ತು ಸುಸ್ಥಿರ ತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ರೂಪಿಸಲಾಗುತ್ತಿದೆ. ಯೋಜನೆಯ ಮೊದಲ ಹಂತದಲ್ಲಿ ಕ್ಷೇತ್ರ ಸಮೀಕ್ಷೆ, ಮಾಹಿತಿ ಸಂಗ್ರಹ, ತ್ಯಾಜ್ಯ ಸಮಸ್ಯೆಗಳ ಮೌಲ್ಯಮಾಪನ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಆರಂಭಿಸಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಪರಿಸರ ಸಂರಕ್ಷಣೆ ಯಲ್ಲಿ ಸಮುದಾಯದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.
ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶ ದಿಂದ ‘ಚೋಟಾ ಕಾಪ್’ ಯೋಜನೆ ರೂಪಿಸಲಾಗಿದೆ. ಯುವಜನರಲ್ಲಿ ಪರಿಸರ ಸ್ನೇಹಿ ಹೊಸ ಆಲೋಚನೆಗಳಿಗೆ ಉತ್ತೇಜನ ನೀಡಲು ಐಡಿಯಾಥಾನ್ ಆರಂಭಿಸಲಾಗಿದ್ದು, ಆಯ್ಕೆಯಾಗುವ ಪರಿಸರ ಸ್ನೇಹಿ ಆವಿಷ್ಕಾರಗಳಿಗೆ ಅಭಿವೃದ್ಧಿ ನಿಧಿಯ ನೆರವು ನೀಡಲಾಗುವುದು. ‘ಹಸಿರು ಸಂವಾದ’ದ ಅಂಗವಾಗಿ ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿ–2026ಕ್ಕೆ ಅನುಗುಣವಾಗಿ ತ್ಯಾಜ್ಯ ವಿಂಗಡಣೆ, ಸಂಗ್ರಹ, ವೈಜ್ಞಾನಿಕ ಸಂಸ್ಕರಣೆ ಹಾಗೂ ಮರುಬಳಕೆಯ ಕುರಿತು ಪ್ರಾತ್ಯಕ್ಷಿಕೆಗಳು ಮತ್ತು ಚರ್ಚೆಗಳು ನಡೆಯಲಿವೆ. ಇದರೊಂದಿಗೆ ‘ಸ್ವಚ್ಛ ಗ್ರಾಮ’ ಸ್ಪರ್ಧೆ, ಪರಿಸರ ಜಾಗೃತಿ ರೀಲ್ಸ್ ಸ್ಪರ್ಧೆ, ವಿದ್ಯಾರ್ಥಿ ಚಟುವಟಿಕೆಗಳು ಹಾಗೂ ವಿವಿಧ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 6 ಮತ್ತು 7ರಂದು ನಡೆಯುವ ರಾಷ್ಟ್ರೀಯ ಸಮ್ಮೇಳನದಲ್ಲಿ ಯೋಜನೆಯಲ್ಲಿ ಭಾಗವಹಿಸಿರುವ ಗ್ರಾಮ ಪಂಚಾಯಿತಿಗಳು ತಮ್ಮ ಅನುಭವ ಹಾಗೂ ಸಾಧನೆಗಳನ್ನು ಹಂಚಿಕೊಳ್ಳಲಿವೆ. ದೇಶದ ಪ್ರಮುಖ ಪರಿಸರ ವಿಜ್ಞಾನಿ ಗಳು, ತಜ್ಞರು ಹಾಗೂ ಪರಿಸರ ಹೋರಾಟಗಾರರು ವಿವಿಧ ವೈಜ್ಞಾನಿಕ ಅಧಿವೇಶನಗಳಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆ, ನದಿ ಮಾಲಿನ್ಯ ನಿಯಂತ್ರಣ ಹಾಗೂ ಸುಸ್ಥಿರ ತ್ಯಾಜ್ಯ ನಿರ್ವಹಣೆ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ. ಸಮ್ಮೇಳನದ ಸಮಾರೋಪದಲ್ಲಿ ನದಿಗಳಿಗೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಣಾಮಕಾರಿ ಯಾಗಿ ಕಡಿಮೆ ಮಾಡಿದ ಗ್ರಾಮಕ್ಕೆ ‘ಸ್ವಚ್ಛ ಗ್ರಾಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ‘ವೇಸ್ಟ್ ವಾರಿಯರ್ಸ್’, ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧೆಗಳ ವಿಜೇತರನ್ನೂ ಗೌರವಿಸಲಾಗುವುದು.
ರಾಜ್ಯಮಟ್ಟದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಾಂಸ್ಕೃತಿಕ ಜಂಬೂರಿ ಆಳ್ವಾಸ್ ನುಡಿಸಿರಿ–ವಿರಾಸತ್ 2027ರ ಅಂಗವಾಗಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯಮಟ್ಟದ ಸಾಂಸ್ಕೃತಿಕ ಜಂಬೂರಿ ಆಯೋಜಿಸ ಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 5,000ಕ್ಕೂ ಅಧಿಕ ಸ್ಕೌಟ್ಸ್, ಗೈಡ್ರೋವರ್ಸ್ ಹಾಗೂ ರೇಂಜರ್ಸ್ಗಳು ಜಂಬೂರಿಯಲ್ಲಿ ಭಾಗವಹಿಸಲಿದ್ದಾರೆ.ಜಂಬೂರಿಯಲ್ಲಿ ವಿವಿಧ ತರಬೇತಿ ಹಾಗೂ ಚಟುವಟಿಕೆಗಳನ್ನು ಆಯೋಜಿಸಲಾಗುವುದು.
ದೇಶೀಯ ಕಲೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 800 ವಿದ್ಯಾರ್ಥಿ ಕಲಾವಿದರಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಶಾಸ್ತ್ರೀಯ ನೃತ್ಯ, ಸಂಗೀತ, ಪಕ್ಕವಾದ್ಯ ಹಾಗೂ ಏಕವ್ಯಕ್ತಿ ಪ್ರದರ್ಶನ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ತರಬೇತಿ ಪಡೆಯುತ್ತಿರುವ ಹಾಗೂ ಪರಿಣತಿ ಹೊಂದಿರುವ ಕಲಾವಿದರು ಇದರಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯಮಟ್ಟದ ಹಿರಿಯ ಹಾಗೂ ಕಿರಿಯ ಹಂತದ ಕಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ 30 ವರ್ಷದೊಳಗಿನ ವಿದ್ಯಾರ್ಥಿ ಕಲಾವಿದರು ಹಾಗೂ ಹವ್ಯಾಸಿ ಕಲಾವಿದರಿಗೆ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ಯುವ ಕಲಾವಿದರಿಗೆ ಮಾರ್ಗದರ್ಶನ ಒದಗಿಸುವುದು ಹಾಗೂ ದೇಶೀಯ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದು ಮೋಹನ್ ಆಳ್ವ ತಿಳಿಸಿದ್ದಾರೆ.
ಜ.8ರಂದು ಆಳ್ವಾಸ್ ವಿದ್ಯಾರ್ಥಿಸಿರಿ:-
ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಜ.8ರಂದು ‘ಆಳ್ವಾಸ್ ವಿದ್ಯಾರ್ಥಿಸಿರಿ’ ಒಂದು ದಿನದ ಸಮ್ಮೇಳನ ನಡೆಯಲಿದೆ. ವಿದ್ಯಾರ್ಥಿಗಳ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಕಲ್ಪಿಸುವುದು ಇದರ ಉದ್ದೇಶವಾಗಿದೆ.
*ಜ.9ರಂದು ಮೊದಲ ಬಾರಿಗೆ ‘ಆಳ್ವಾಸ್ ಯುವಸಿರಿ’ಈ ಬಾರಿ ಹೊಸ ಪರಿಕಲ್ಪನೆಯಾಗಿ ಆಯೋಜಿಸಲಾಗುತ್ತಿದೆ. ಪದವಿ, ಸ್ನಾತಕೋತ್ತರ ಹಾಗೂ ವಿವಿಧ ಕ್ಷೇತ್ರಗಳ ಯುವಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಅವರ ಚಿಂತನೆ, ಪ್ರತಿಭೆ ಮತ್ತು ಕನಸುಗಳಿಗೆ ಸ್ಪಂದಿಸುವ ಸಮ್ಮೇಳನವಾಗಿ ಇದನ್ನು ರೂಪಿಸಲಾಗಿದೆ.
ನುಡಿಸಿರಿ–ವಿರಾಸತ್‌ನ ವಿಶೇಷ ಆಕರ್ಷಣೆಯಾಗಿ ಕೃಷಿಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳಗಳು ನಡೆಯಲಿವೆ.
ಪ್ರತಿನಿಧಿಗಳ ನೋಂದಣಿಗೆ ಅವಕಾಶ
ಆಳ್ವಾಸ್ ನುಡಿಸಿರಿ–ವಿರಾಸತ್ 2027ರಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಇಚ್ಛಿಸುವವರು ಐದು ದಿನಗಳಿಗಾಗಿ ರೂ.500 ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜ್ಞಾನಪರ ಕಾರ್ಯಕ್ರಮಗಳ ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಡಾ.ಮೋಹನ್ ಆಳ್ವ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಇದರ ನುಡುಸಿರಿ,ವಿರಾಸತ್ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions