ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಸಮಿತಿ ವತಿಯಿಂದ ಮೂಳೂರು ಅಲ್ ಇಹ್ಸಾನ್ ಶಾಲಾ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಮಾಅತ್ ಅಸ್ಸೆಂಬ್ಲೇಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಕುಂಬೋಳ್ ತಂಙಳ್, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಯಾರೂ ನಿರ್ಲಕ್ಷ್ಯಿಸಬಾರದು ಎಂದು ಕರೆ ನೀಡಿದರು.
ಪ್ರತಿಯೊಂದು ಜಮಾಅತ್, ಮೊಹಲ್ಲಾ ಹಾಗೂ ಸ್ಥಳೀಯ ಸಮಿತಿಗಳಲ್ಲಿ ಎಸ್‌ಐಆರ್ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಸಲ್ಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಅದೇ ರೀತಿ, ತಲಾಕ್, ಫಸ್ಕ್ ಹಾಗೂ ಇತರ ವೈಯಕ್ತಿಕ ಮತ್ತು ಸಾಮೂಹಿಕ ಸಮಸ್ಯೆಗಳಿಗೆ ಆಯಾ ಜಮಾಅತ್‌ಗಳಲ್ಲಿಯೇ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದ ಅವರು, ಜಮಾಅತ್ ಮಟ್ಟದಲ್ಲಿಯೇ ಬಗೆಹರಿಸಬಹುದಾದ ಸಮಸ್ಯೆಗಳಿಗಾಗಿ ಅನಗತ್ಯವಾಗಿ ಕೋರ್ಟ್ ಹಾಗೂ ಪೊಲೀಸ್ ಠಾಣೆಗಳಿಗೆ ಅಲೆದಾಡುವ ಪರಿಸ್ಥಿತಿಗೆ ಕಡಿವಾಣ ಹಾಕಬೇಕು ಎಂದು ನಿರ್ದೇಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್ ನೇಜಾರು ವಹಿಸಿದ್ದರು. ಉಡುಪಿ ಜಿಲ್ಲಾ ಸಹಾಯಕ ಖಾಝಿ ಬಹು. ಅಬ್ದುರ್ರಹ್ಮಾನ್ ಮದನಿ ಮೂಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೊಹಲ್ಲಾ ಆಡಳಿತ ಎಂಬ ವಿಷಯದ ಬಗ್ಗೆ ಬಹು ಹಂಝ ಮದನಿ ಮಿತ್ತೂರು ಹಾಗೂ ನಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಹಿರಿಯ ಪೊಲೀಸ್ ಅಧಿಕಾರಿ ಅಬ್ದುರಝಾಕ್ ವಿಷಯ ಮಂಡಿಸಿದರು, ಯು.ಕೆ. ಮುಸ್ತಫಾ ಸಅದಿ ಮೂಳೂರು ಮುನ್ನುಡಿ ಭಾಷಣ ಮಾಡಿದರು. ಚರ್ಚಾಗೋಷ್ಠಿಗೆ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ನೇತೃತ್ವ ನೀಡಿದರು.
ಜಿಲ್ಲಾ ಉಲಮಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಸುಲೈಮಾನ್ ಸಅದಿ ಅಫ್ಳಲಿ ಕಾರ್ಕಳ, ಹಾಫಿಳ್ ಅಶ್ರಫ್ ಸಖಾಫಿ ಮೂಳೂರು, ಅಬ್ದುಲ್ ಲತೀಫ್ ಫಾಳಿಲಿ ನಾವುಂದ ಹಾಗೂ ಅಬ್ದುರ್ರಶೀದ್ ಸಖಾಫಿ ಮಜೂರು ಸಾಂದರ್ಭಿಕವಾಗಿ ಮಾತನಾಡಿದರು.
ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುರ್ರಝಾಖ್ ಖಾಸಿಮಿ, ಎಸ್‌ಎಂಎ ಜಿಲ್ಲಾಧ್ಯಕ್ಷ ಹುಸೈನ್ ಮೋನು, ಹಾಜಿ ಪಿ.ಎಚ್. ಉಸ್ಮಾನ್, ಮುರಾದ್ ಅಲಿ ಮೂಳೂರು, ಮನ್ಸೂರು ಮೆಕ್ಕಾಸ್ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು ಸ್ವಾಗತಿಸಿದರು. ಅಶ್ರಫ್ ಫುರ್ಖಾನಿ ಕಾರ್ಯಕ್ರಮ ನಿರೂಪಿಸಿ, ಎನ್.ಸಿ. ರಹೀಂ ವಂದಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions