ನಗರದ ಬನ್ನಂಜೆ ರಾಷ್ಟ್ರೀಯ ಹೆದ್ದಾರಿ 169 ಎ ಯಲ್ಲಿನ ಯೂಟರ್ನ್ ವಿಸ್ತರಿಸಲು ಡಿವೈಡರ್ ಅಗೆದಿರುವ ವಿಚಾರವಾಗಿ ಬುಧವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲ ಉಂಟಾಯಿತು. ನಗರಸಭೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ವಿರೋಧ ಪಕ್ಷದ ಸದಸ್ಯ ಕ್ಷಮೆ ಯಾಚಿಸುವಂತೆ ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ವಿರೋಧ ಪಕ್ಷದ ಸದಸ್ಯರು ಸಭೆಯಿಂದ ಹೊರನಡೆದರು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಟಿ.ಜಿ.ಹೆಗ್ಡೆ, ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ಸ್ ಬಟ್ಟೆ ಅಂಗಡಿ ಎದುರಿನ ಡಿವೈಡರ್‌ನ್ನು ಅಗಲ ಮಾಡಿ, ಬಟ್ಟೆ ಯಂಗಡಿಯವರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದರಲ್ಲಿ ನಗರಸಭೆ ಭ್ರಷ್ಟಾಚಾರ ಎಸಗಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಹಾಗೂ ನಗರಸಭೆ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಹೇಳಿಕೆಯನ್ನು ಓದಿದರು.
ಇದಕ್ಕೆ ಧ್ವನಿಗೂಡಿಸಿದ ಬನ್ನಂಜೆ ವಾರ್ಡಿನ ಸದಸ್ಯ ಸವಿತಾ ಹರೀಶ್‌ರಾಂ, ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕಾಮಗಾರಿಯನ್ನು ನಗರಸಭೆ ಮೇಲೆ ಹೊರಿಸಿ ಸದಸ್ಯರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಲಾಗಿದೆ. ಈ ಬಗ್ಗೆ ಸುರೇಶ್ ಶೆಟ್ಟಿ ಬನ್ನಂಜೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಕೂಡಲೇ ಎದ್ದು ನಿಂತ ಸುರೇಶ್ ಶೆಟ್ಟಿ, ನಾನು ಯಾಕೆ ಕ್ಷಮೆಯಾಚಿಸಬೇಕೆಂದು ಸದಸ್ಯೆಯನ್ನು ದ್ದೇಶಿಸಿ ಮಾತನಾಡಿದರು.
ಪೌರಾಯುಕ್ತರಿಂದ ಸ್ಪಷ್ಟನೆ
ಸುರೇಶ್ ಶೆಟ್ಟಿ ಬನ್ನಂಜೆ ಕ್ಷಮೆಯಾಚಿಸುವಂತೆ ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಗಿ ಕೋಲಾಹಲ ಸೃಷ್ಠಿ ಯಾಯಿತು. ಇದರಲ್ಲಿ ನಗರಸಭೆ ಪ್ರಾತ ಇದೆಯೇ ಎಂಬುದರ ಬಗ್ಗೆ ಪೌರಾಯುಕ್ತರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಪೌರಾಯುಕ್ತ ಮಹಾಂತೇಶ್ ಹಂಗರಗಿ ಮಾತನಾಡಿ, ಬನ್ನಂಜೆಯಲ್ಲಿ ಸಂಚಾರ ಸಮಸ್ಯೆ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಶಿಫಾರಸ್ಸಿನಂತೆ ಎಸ್ಪಿಯವರ ನಿರ್ದೇಶನದಲ್ಲಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಇಂಜಿನಿಯರ್ ಡಿವೈಡರ್ ತೆರವು ಮಾಡಿದ್ದು, ಇದಕ್ಕೆ ನಗರಸಭೆ ಯಿಂದ ಯಾವುದೇ ಅನುಮತಿ ನೀಡಿಲ್ಲ. ಇದು ನಗರಸಭೆ ರಸ್ತೆ ಅಲ್ಲದೆ ಇರುವುದರಿಂದ ಇದರಲ್ಲಿ ನಗರಸಭೆಯ ಕಿಂಚಿತ್ತೂ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸದಸ್ಯರಾದ ಗಿರೀಶ್ ಅಂಚನ್ ಹಾಗೂ ಸುಮಿತ್ರಾ ಆರ್.ನಾಯಕ್ ಎಸ್ಪಿಯ ಈ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಆರೋಪ, ಟೀಕೆ ಮಾಡುವುದು ಸಹಜ. ಅದಕ್ಕಾಗಿ ಕ್ಷಮೆಯಾಚನೆಗೆ ಪಟ್ಟು ಹಿಡಿಯುವುದು ಸರಿಯಲ್ಲ ಎಂದರು. ಆದರೆ ಪಟ್ಟು ಬಿಡದ ಆಡಳಿತ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿ, ಸುರೇಶ್ ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ವಿಪಕ್ಷ ಸದಸ್ಯರಿಂದ ಸಭಾತ್ಯಾಗ
ಸದಸ್ಯೆ ಸವಿತಾ ಹರೀಶ್‌ರಾಂ ಮಾತನಾಡುವಾಗ ಸುರೇಶ್ ಶೆಟ್ಟಿ ಬನ್ನಂಜೆ ಸದನದ ನಿಯಮ ಉಲ್ಲಂಘಿಸಿ ವರ್ತಿಸಿದ್ದರು ಎಂದು ಆರೋಪಿಸಿ ಆಡಳಿತ ಪಕ್ಷದ ಮಹಿಳಾ ಸದಸ್ಯರು ಸದನದ ಬಾವಿಗೆ ಇಳಿದು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ಬಳಿಕ ಮಾತನಾಡಿದ ರಮೇಶ್ ಕಾಂಚನ್, ನಗರಸಭೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಸುರೇಶ್ ಶೆಟ್ಟಿ ಹೇಳಿಕೆಗೆ ನಾನು ಕ್ಷಮೆಯಾಚಿಸುತ್ತೇನೆ ಎಂದರು. ಇದಕ್ಕೆ ಒಪ್ಪದ ಆಡಳಿತ ಪಕ್ಷ ಸದಸ್ಯರು ಮತ್ತೆ ಗದ್ದಲ ಮುಂದುವ ರೆಸಿದರು. ಸುರೇಶ್ ಶೆಟ್ಟಿಯೇ ಸ್ವತಃ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸುರೇಶ್ ಶೆಟ್ಟಿ, ಸದಸ್ಯ ಟಿ.ಜಿ.ಹೆಗ್ಡೆ ಓದಿರುವ ಹೇಳಿಕೆ ಯನ್ನು ನಾನು ನೀಡಿಲ್ಲ. ನಾನು ನೀಡಿರುವ ಹೇಳಿಕೆಯೇ ಬೇರೆ. ನನಗೆ ಈ ರಸ್ತೆ ನಗರಸಭೆಗೆ ಸಂಬಂಧಿಸಿದಲ್ಲ ಎಂಬುದು ಈಗಷ್ಠೆ ತಿಳಿಯಿತು ಎಂದರು.
ಸುರೇಶ್ ಶೆಟ್ಟಿ ಹೇಳಿಕೆಯಿಂದ ನಮಗೆಲ್ಲರಿಗೂ ನೋವು ಆಗಿದೆ ಎಂದು ಅಧ್ಯಕ್ಷ ಪ್ರಭಾಕರ ಪೂಜಾಪಿ ತಿಳಿಸಿದರು. ಈ ಮಧ್ಯೆ ಆಡಳಿತ ಪಕ್ಷದ ಸದಸ್ಯರು ತಮ್ಮ ಪಟ್ಟು ಮುಂದುವರೆಸಿದರು. ಕೊನೆಗೆ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕ ಹಿರಿಯ ಸದಸ್ಯೆ ಸುಮಿತ್ರಾ ನಾಯಕ್ ಹೊರಗಡೆ ವಿರೋಧ ಪಕ್ಷದ ಸದಸ್ಯರನ್ನು ಮನವೊಲಿಸಿ ಸಭೆಗೆ ಕರೆತಂದರು. ಈ ಮೂಲಕ ಸುಮಾರು ಒಂದೂವರೆ ತಾಸು ನಡೆದ ಚರ್ಚೆ ಕೊನೆಗೊಂಡಿತು.
ಸಭೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಉಪಸ್ಥಿತರಿದ್ದರು.
ಮಳೆ ಬಿಟ್ಟ ಕೂಡಲೇ ರಸ್ತೆ ದುರಸ್ತಿ
ಸಭೆಯಲ್ಲಿ ಮೆಸ್ಕಾಂಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸದಸ್ಯರು ಮೆಸ್ಕಾಂ ಅಧಿಕಾರಿ ಗಣರಾಜ ಭಟ್ ಅವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದ್ಯ ಕೆಲವು ಕಡೆಗಳಲ್ಲಿ ಸೆಕ್ಷನ್ ಆಫೀಸರ್‌ಗಳ ಕೊರತೆ ಇದ್ದು, ಕೆಲವರು ಎರಡೆರಡು ಕಡೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾಗಾಗಿ ಎಲ್ಲ ಕಡೆಯ ದೂರು ಸ್ವೀಕರಿಸಿ ಕೂಡಲೇ ವಿಲೇವಾರಿ ಮಾಡಲು ಆಗುತ್ತಿಲ್ಲ ಎಂದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ನಗರಸಭೆಯ 35ವಾರ್ಡ್ ಗಳನ್ನು ಮೂರು ವಿಭಾಗ ಮಾಡಿ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಿ ಸಮಸ್ಯೆಯನ್ನು ಪರಿಹರಿಸಬೇಕು ಎಂದರು. ಮಳೆಯಿಂದ ನಗರದಲ್ಲಿನ ರಸ್ತೆ ಹಾಳಾಗಿರುವ ವಿಚಾರವನ್ನು ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದರು. ಮಳೆ ಬಿಟ್ಟ ಕೂಡಲೇ ಕೂಲ್ ಟಾರ್ ಹಾಕಿ ರಸ್ತೆ ದುರಸ್ತಿ ಮಾಡಲಾಗುವುದು ಎಂದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions