ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡುವ ಯಾವುದೇ ರೀತಿಯ ಪ್ರಸ್ತಾವ ರಾಜ್ಯ ಸರಕಾರದ ಮುಂದೆ ಇಲ್ಲ’ ಎಂದು ಮುಜರಾಯಿ ಹಾಗೂ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಬಿಡುಗಡೆ ಮಾಡಬೇಕು’ ಎಂದು ಕೋರಿ ವಿಎಚ್‍ಪಿ, ರಾಜ್ಯಪಾಲರಿಗೆ ನೀಡಿರುವ ದೂರು ನೀಡಿದೆ. ಇಷ್ಟೆಲ್ಲಾ ಮಾಡುವ ಅಗತ್ಯವಿಲ್ಲ. ಅದರ ಬದಲಿಗೆ ದೇಶದಲ್ಲೇ ಮೋದಿ ನೇತೃತ್ವದ ಸರಕಾರವೇ ಒಂದು ಕಾನೂನು ತಂದರೆ ನಮ್ಮ ಅಭ್ಯಂತರವಿಲ್ಲ’ ಎಂದು ತಿರುಗೇಟು ನೀಡಿದರು.
‘ಈ ಹಿಂದೆ ಧಾರ್ಮಿಕ ದತ್ತಿ ಇಲಾಖೆಯೇ ಇರಲಿಲ್ಲ. ಅನುವಂಶಿಕ ದೇವಾಲಯಗಳಿದ್ದವು. ಆಗ ಅಣ್ಣ-ತಮ್ಮಂದಿರು, ಸಂಬಂಧಿಕರ ಮಧ್ಯೆಯೇ ದೇವಾಲಯಗಳ ಉತ್ತರಾಧಿಕಾರಿಗಳ ನಡುವೆ ಜಗಳ, ವಿವಾದಗಳು ಆರಂಭವಾದ ಕಾರಣ ಬ್ರಿಟಿಷರ ಕಾಲದಲ್ಲಿ ಮುಜರಾಯಿ ಇಲಾಖೆ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವು ಈ ಇಲಾಖೆಯನ್ನು ಸೃಷ್ಟಿಸಿಲ್ಲ’ ಎಂದು ರಾಮಲಿಂಗಾರೆಡ್ಡಿ ವಿವರಣೆ ನೀಡಿದರು.
‘ರಾಜ್ಯದಲ್ಲಿರುವ ‘ಸಿ’ ವರ್ಗದ ದೇವಾಲಯಗಳಿವೆ, ಅವುಗಳನ್ನು ಅಭಿವೃದ್ಧಿ ಮಾಡಿದರೆ ಸಾಕಾಗಿದೆ. ಅದಕ್ಕೂ ಬಿಜೆಪಿಯವರು ಅಡ್ಡ ಬಂದರು. ಬಿಜೆಪಿ ಅವರು ದೇವರ ಕೆಲಸಕ್ಕೂ ಅಡ್ಡಿಪಡಿಸುತ್ತಾರೆ ಎಂದು ದೂರಿದ ರಾಮಲಿಂಗಾರೆಡ್ಡಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ’ಯೋಜನೆಯಿಂದ ದೇವಾಲಯಗಳಿಗೆ ಆದಾಯ ಬರುತ್ತಿದೆ ಎಂದರು.
ಸಾರಿಗೆ ಇಲಾಖೆಗೆ ‘ಶಕ್ತಿ’ ಯೋಜನೆಯಡಿ ಸರಕಾರದಿಂದ ಅನುದಾನ ಬಾಕಿಯಿದೆ. ಅದರಲ್ಲಿ ಒಂದು ಸಾವಿರ ಕೋಟಿ ರೂ.ಉಚಿತವಾಗಿ ನೀಡಿದ್ದಾರೆ. 3 ಸಾವಿರ ಕೋಟಿ ರೂ.ಬಾಕಿಯಿತ್ತು. ಒಂದು ಸಾವಿರ ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆಗೆ ಹಿಂದಿನ ಬಿಜೆಪಿ ಸರಕಾರವೇ ಮೂಲ ಕಾರಣ. ಕಾಂಗ್ರೆಸ್ ಸರಕಾರ ನಗರದ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಲ್ಲದೆ, ಅಗತ್ಯ ಅನುದಾನವನ್ನು ಒದಗಿಸಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions