ಮೈಸೂರು: ‘ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಹೀಗೆಯೇ ಮಾಡಿ ಎಂದು ಹೇಳಲಾಗದು. ತನಿಖೆ ಹೇಗೆ ಮಾಡಬೇಕು ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸುವ ಅಗತ್ಯವಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಂಪರು ಪರೀಕ್ಷೆ ಬೇಕೋ? ಬೇಡವೋ ಎಂಬುದನ್ನು ನಾನು ನಿರ್ಧರಿಸಲಾಗದು. ಎಸ್ಐಟಿ ಸರಿಯಾಗಿಯೇ ತನಿಖೆ ಮಾಡುತ್ತಿದೆ. ಹೇಳಿಕೆ ನೀಡುವುದರಿಂದ ಸತ್ಯ ಹೊರ ಬರುವುದಿಲ್ಲ. ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ. ಆದಷ್ಟು ಬೇಗ ತನಿಖೆ ಮುಗಿಸಿ ಎಂದು ಎಸ್‌ಐಟಿಗೆ ಹೇಳಿದ್ದೇನೆ’ ಎಂದರು.
‘ಧರ್ಮಸ್ಥಳ ರ‍್ಯಾಲಿ’ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಅವರೆಲ್ಲಾ ಮಂಜುನಾಥನ ದರ್ಶನ ಮಾಡಲು ಹೋಗುತ್ತಿರಬೇಕು. ಹೋಗಲಿ. ದರ್ಶನಕ್ಕೆ ಹೋಗುವವರನ್ನ ತಡೆಯಲು ಸಾಧ್ಯವೇ? ಈ ಪ್ರಕರಣದಲ್ಲಿ ಯಾರು ರಾಜಕೀಯ ಮಾಡಬಾರದು’ ಎಂದರು. ‘ಆರ್‌ಎಸ್ಎಸ್ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ, ಅದಕ್ಕೆ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ಸೇರಿದಂತೆ ಯಾವ ಹೇಳಿಕೆಗೂ ನಾನು ಉತ್ತರಿಸುವುದಿಲ್ಲ’ ಎಂದು ಹೇಳಿದರು. ‘ಗೃಹ ಇಲಾಖೆಯಲ್ಲಿ ಲಂಚಾವತಾರವಿದೆ’ ಎಂಬ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಯಾರು ಹಣ ಪಡೆದರು, ಕೊಟ್ಟರು ಎಂಬ ಬಗ್ಗೆ ದೂರು ನೀಡಿದರೆ ತನಿಖೆ ಮಾಡಲಾಗುವುದು’ ಎಂದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions