Advertisement

12 ವರ್ಷದ ಸಾಧನೆ ಎಂದು ವೈಭವೀಕರಿಸುವ ಬಿಜೆಪಿ ತನ್ನ ವಿಫಲತೆಗಳನ್ನು ಮರೆಮಾಚಲು ಅಸಾಧ್ಯ: ಕಾಂಗ್ರೆಸ್

**12 ವರ್ಷದ ಸಾಧನೆ

ಉಡುಪಿ, ಜೂ.15: ಕೇಂದ್ರ ಸರ್ಕಾರ ತನ್ನ 12 ವರ್ಷದ ಆಡಳಿತವನ್ನು ಸಾಧನೆ ಎಂದು ಬಿಂಬಿಸುತ್ತಿದ್ದರೂ, ದೇಶದ ನೈಜ ಸಮಸ್ಯೆಗಳು ಮತ್ತು ವೈಫಲ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಟೀಕಿಸಿದ್ದಾರೆ.

ಸ್ವಾತಂತ್ರ್ಯಾನಂತರ ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ದೂರದೃಷ್ಟಿಯ ಯೋಜನೆಗಳು, ಕೈಗಾರಿಕಾ ಅಭಿವೃದ್ಧಿ, ಅಣೆಕಟ್ಟುಗಳು, ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳ ಸ್ಥಾಪನೆ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಪ್ರಗತಿಗೆ ಭದ್ರ ಬುನಾದಿ ಹಾಕಲಾಯಿತು ಎಂದು ಅವರು ಹೇಳಿದರು.

ಇಂದು ದೇಶದ ಎಲ್ಲಾ ಪ್ರಗತಿಯೂ ಕಳೆದ 12 ವರ್ಷಗಳಲ್ಲಿ ಮಾತ್ರ ಆಗಿರುವಂತೆ ಬಿಜೆಪಿ ಬಿಂಬಿಸುತ್ತಿರುವುದು ಜನರಿಗೆ ತಪ್ಪು ಸಂದೇಶ ನೀಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಸರ್ಕಾರ ಹೇಳುತ್ತಿರುವಾಗ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು, ಜಿಎಸ್‌ಟಿ ಹಾಗೂ ಇಂಧನ ತೆರಿಗೆಗಳಿಂದ ಜನರ ಮೇಲೆ ಹೆಚ್ಚುವರಿ ಹೊರೆ, 160 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲ, ದಿನದಿಂದ ದಿನಕ್ಕೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ಸಾಧನೆ ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ವಿಫಲವಾಗಿದ್ದು, ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದೆ. ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಆದ ನಷ್ಟದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಪುಲ್ವಾಮಾ ಹಾಗೂ ಪಹಲ್ಗಾಮ್‌ ಸೇರಿದಂತೆ ಉಗ್ರ ಚಟುವಟಿಕೆಗಳಿಂದ ಸೈನಿಕರು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿರುವುದು ಆಂತರಿಕ ಭದ್ರತಾ ವೈಫಲ್ಯದ ಸೂಚಕವಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಜೊತೆಗೆ ಟೋಲ್ ಮೂಲಕ ಸಂಗ್ರಹವಾಗಿರುವ ಹಣದ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು ಎಂದ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಕೈಗಾರಿಕಾ ಅಭಿವೃದ್ಧಿ, ಪಡಿತರ ವ್ಯವಸ್ಥೆ, ಭೂ ಸುಧಾರಣೆ ಹಾಗೂ ಪಿಂಚಣಿ ಯೋಜನೆಗಳು ದೇಶದ ಜನರ ಬದುಕು ಕಟ್ಟಿಕೊಟ್ಟಿವೆ ಎಂದು ಹೇಳಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸೇರಿದಂತೆ ದೇಶದ ಗಂಭೀರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೌನ ವಹಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಟೀಕಿಸಿದ ಅವರು, ವಿರೋಧ ಪಕ್ಷದ ನಾಯಕರನ್ನು ದುರ್ಬಲಗೊಳಿಸಲು ಸರ್ಕಾರಿ ಸಂಸ್ಥೆಗಳನ್ನು ಬಳಸುವುದು ಹಾಗೂ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಅಸ್ತಿತ್ವವನ್ನು ಕುಗ್ಗಿಸುವ ಪ್ರಯತ್ನ ದೇಶವನ್ನು ಏಕಾಧಿಕಾರದತ್ತ ಕೊಂಡೊಯ್ಯುವ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions