ಆಶಾ ಕಾರ್ಯಕರ್ತರಿಗೆ 10 ಸಾವಿರ ರೂ. ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ಎಐಯುಟಿಯುಸಿ) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನೂರಾರು ಸಂಖ್ಯೆಯ ಆಶಾ ಕಾರ್ಯಕರ್ತೆಯರು ಧರಣಿ ನಡೆಸಿ, ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹಧನ ಸೇರಿಸಿ ಮಾಸಿಕ ಕನಿಷ್ಠ 10 ಸಾವಿರ ರೂ. ಗ್ಯಾರಂಟಿಯನ್ನು ಈ ವರ್ಷದ ಎಪ್ರಿಲ್ ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. 2025 ಮಾರ್ಚ್ ರಾಜ್ಯ ಬಜೆಟ್ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ 1,000 ರೂ. ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆ ಯರಿಗೂ ಹೆಚ್ಚಳ ಮಾಡಬೇಕು.
ತರ್ಕಬದ್ದಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುವ ಜನಸಂಖ್ಯೆಯ ಮಿತಿ ಹೆಚ್ಚಿಸುವುದನ್ನು ಕೈಬಿಡಬೇಕು. ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ಆಶಾ ಕಾರ್ಯಕರ್ತೆಯರ ಅವೈಜ್ಞಾನಿಕ ಕಾರ್ಯನಿರ್ವಹಣೆ ಮೌಲ್ಯಮಾಪನ ಕೈಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ನಿವೃತ್ತ ಆಶಾ ಕಾರ್ಯಕರ್ತರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಈಡಿಗಂಟು ನೀಡಬೇಕು. ನಗರ ಆಶಾ ಕಾರ್ಯಕರ್ತರಿಗೆ 2,000 ರೂ. ಗೌರವಧನ ಹೆಚ್ಚಿಸಬೇಕು. 2025 ಜೂನ್-ಜುಲೈನಲ್ಲಿ ಕೇಂದ್ರ ಸರಕಾರ ಹೆಚ್ಚಿಸಿದ ಪ್ರೋತ್ಸಾಹಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಧರಣಿಯಲ್ಲಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್, ಜಿಲ್ಲಾ ಉಸ್ತುವಾರಿ ಹರಿಣಿ, ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಸುಹಾಸಿನಿ, ಕಾರ್ಯದರ್ಶಿ ಉಮಾ ಕೆ.ಎಸ್., ಕಾರ್ಕಳ ತಾಲೂಕು ಅಧ್ಯಕ್ಷೆ ಯಶೋಧಾ, ಕುಂದಾಪುರ ತಾಲೂಕು ಅಧ್ಯಕ್ಷೆ ಭಾರತಿ ವಂಡ್ಸೆ, ಉಡುಪಿ ತಾಲೂಕು ಅಧ್ಯಕ್ಷೆ ಶಾಂಭಾವಿ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions