ಅಕ್ಕಪಡೆ ಮಹಿಳೆಯರ ಶಕ್ತಿ, ಮಹಿಳೆಯರ ಸ್ವಾಭಿಮಾನದ ಪ್ರತೀಕ, ಶೀಘ್ರವೇ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ನಗರದ ಹೃದಯ ಭಾಗ ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ಅಕ್ಕಪಡೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸದ್ಯಕ್ಕೆ ಪ್ರಾಯೋಗಿಕವಾಗಿ ಕೆಲವು ಸ್ಥಳಗಳಲ್ಲಿ ಅಕ್ಕಪಡೆ ಆರಂಭಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿ ಅಂಗೀಕಾರ ಪಡೆದು ತಾಲೂಕು ಮಟ್ಟಕ್ಕೂ ಅಕ್ಕಪಡೆ ವಿಸ್ತರಿಸಲಾಗುವುದು ಎಂದರು.
ಅಕ್ಕಪಡೆ ಎಂದರೆ ಮಹಿಳೆಯರಿಗೆ ಹಾಗೂ ಮಕ್ಕಳ ಪಾಲಿಗೆ ಭರವಸೆ ಇದ್ದಂತೆ. ಜಿಲ್ಲೆಯಾದ್ಯಂತ ಮಹಿಳೆಯರು, ಮಕ್ಕಳು ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಅಕ್ಕಪಡೆಯನ್ನು ರಚಿಸಲಾಗಿದೆ ಎಂದು ಸಚಿವರು ಹೇಳಿದರು.
ಅಕ್ಕಪಡೆ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಾದ ಮಾಲ್, ಜಾತ್ರಾ ಮಹೋತ್ಸವ, ಲೇಡಿಸ್ ಹಾಸ್ಟೆಲ್‌ಗಳು, ಕಾಲೇಜುಗಳು, ಸಮುದಾಯ ಭವನ ಸೇರಿದಂತೆ ಜನನಿಬೀಡ ಪ್ರದೇಶಗಳಿಗೆ ಭೇಟಿ ಕೊಡಲಿದ್ದಾರೆ. ಅಕ್ಕಪಡೆಯ ಉದ್ದೇಶ ಸಫಲವಾಗಬೇಕು ಎಂದರೆ ನಾಗರಿಕ ಸಮಾಜ ಕೂಡ ಇದಕ್ಕೆ ಬೆಂಬಲ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಬೇರು ಮಟ್ಟದಿಂದಲೇ ಬಾಲ್ಯವಿವಾಹವನ್ನು ತಡೆಗಟ್ಟುವುದೇ ಅಕ್ಕಪಡೆ ಉದ್ದೇಶ, ಜೊತೆಗೆ ಬಾಲ ಗರ್ಭಿಣಿ, ಪೋಕ್ಸೋ ಕೇಸ್‌ಗಳನ್ನು ಕಿತ್ತುಹಾಕಬೇಕು. ಮಹಿಳೆಯರು ನಿರ್ಭಿತಿಯಿಂದ ಓಡಾಡಬೇಕು ಎಂಬುದೇ ಅಕ್ಕಪಡೆ ಉದ್ದೇಶ ಎಂದು ಹೇಳಿದರು.
ಅಕ್ಕಪಡೆ ಎಂದರೆ ಆಸರೆ, ಶಕ್ತಿ, ಸ್ವಾಭಿಮಾನ, ನಾಗರಿಕ ಸಮಾಜದಲ್ಲಿ ಎಲ್ಲರೂ ಕೂಡ ನ್ಯಾಯಯುತವಾಗಿ ನಡೆದುಕೊಳ್ಳಬೇಕು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ದೌರ್ಜನ್ಯಕ್ಕೊಳಗಾಗಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ತೆರೆಯಲಾಗಿದೆ. ನಮ್ಮ ಇಲಾಖೆಯಿಂದ ಸಹಾಯವಾಣಿ ತೆರೆಯಲಾಗಿದ್ದು, 1098 ಸಂಖ್ಯೆಗೆ ಕರೆ ಮಾಡಬಹುದು. ಅಕ್ಕ ಪಡೆಗೆ ಮಹಿಳಾ ಸಹಾಯವಾಣಿ 181, ಜೊತೆಗೆ ಪೊಲೀಸ್ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಅಂಟಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಹಾಯವಾಣಿಯನ್ನು ಹೆಣ್ಣುಮಕ್ಕಳು ಸೂಕ್ತರೀತಿಯಲ್ಲಿ ಬಳಸಿಕೊಳ್ಳಬೇಕು, ನಿಮ್ಮ ಮನೆಗಳಲ್ಲಿ ತೊಂದರೆ ಅನುಭವಿಸುತ್ತಿದ್ದರೂ ಸಹಾಯವಾಣಿ ಮೂಲಕ ಅಕ್ಕಪಡೆಯನ್ನು ಸಂಪರ್ಕಿಸಬಹುದು. ಸಂಕಷ್ಟದಲ್ಲಿರುವವರಿಗೆ ಆಸರೆ ನೀಡಲು ಅಕ್ಕಪಡೆ ಎಲ್ಲರ ಜೊತೆಗೆ ಕೈಜೋಡಿಸಲಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ರಾಜ್ಯ ಅಕ್ಕಪಡೆಯ ಸಂಯೋಜಕರಾದ ಶ್ರೀಮತಿ ಸೈನಿ ನೇತೃತ್ವದ ಬೀದರ್ ಜಿಲ್ಲೆಯ ಅಕ್ಕಪಡೆಯ ವತಿಯಿಂದ ಆತ್ಮರಕ್ಷಣೆಯ ಕುರಿತು ಸಾಹಸ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಆಯುಕ್ತರಾದ ಭೂಷಣ್ ಗುಲಾಬರಾವ್ ಬೋರಸೆ, ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್, ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಚೇತನಕುಮಾರ್ ಎಂ.ಎನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಇಲಾಖೆಯ ನಿರೂಪಣಾಧಿಕಾರಿ ಅನಿಲಕುಮಾರ್ ಹೆಗ್ಡೆ ಸೇರಿದಂತೆ ಗೃಹರಕ್ಷಕಿಯರು ಉಪಸ್ಥಿತರಿದ್ದರು.
================
* *ಸಿಎಂ ಬದಲಾವಣೆ ವಿಚಾರ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ*
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ರಾಜ್ಯದಲ್ಲಿ ಈ ಬಗ್ಗೆ ಚರ್ಚಿಸಿದರೆ ಅಕ್ಷಮ್ಯ ಅಪರಾಧ ಆಗುತ್ತದೆ ಎಂದರು.
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ವರ್ಷದ 9 ತಿಂಗಳು ಮಳೆಯಾದರೂ ಬೇಸಿಗೆ ವೇಳೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದೇ ಇರುತ್ತದೆ. ಈ ಬಾರಿ ಅಂತಹ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಹಿರೇ ಬಾಗೇವಾಡಿ ಗ್ರಾಮದಲ್ಲಿ ಬಸ್ ನಿಲ್ದಾಣದ ಅವಶ್ಯಕತೆ ಇದೆ. ಈಗಾಗಲೇ ಪ್ರಸ್ತಾವನೆಯೂ ಸಿದ್ಧಗೊಂಡಿದೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು, ಬಸ್ ನಿಲ್ದಾಣಕ್ಕೆ ಸೂಕ್ತ ಜಾಗದ ಕೊರತೆ ಕಾಡುತ್ತಿದೆ. ಶೀಘ್ರವೇ ಇದಕ್ಕೆ ಪರಿಹಾರ ಸಿಗಲಿದೆ. ಅಲ್ಲದೆ, ಬೆಳಗಾವಿ ಗ್ರಾಮೀಣ ತಾಲೂಕು ರಚನೆ ಬಗ್ಗೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions