Advertisement

ವಿಧಾನ ಪರಿಷತ್‌ಗೆ ಆರತಿ ಕೃಷ್ಣ, ಕೆ.ಶಿವಕುಮಾರ್‌, ರಮೇಶ್ ಬಾಬು, ಜಕ್ಕಪ್ಪನವರ್ ನಾಮನಿರ್ದೇಶನ

ಬೆಂಗಳೂರು : ಪ್ರಸ್ತುತ ರಾಜ್ಯ ವಿಧಾನ ಪರಿಷತ್ತಿನಲ್ಲಿ ಖಾಲಿಯಿರುವ ಸ್ಥಾನಗಳಿಗೆ ನಾಲ್ವರನ್ನು ರಾಜ್ಯ ಸರಕಾರ ನಾಮ ನಿರ್ದೇಶನ ಮಾಡಿರುವುದಾಗಿ ವರದಿಯಾಗಿದೆ. ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ರಮೇಶ್ ಬಾಬು, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಹಿರಿಯ ಪತ್ರಕರ್ತ ಕೆ.ಶಿವಕುಮಾರ್‌ ಮತ್ತು ದಲಿತ ಮುಖಂಡ ಎಫ್‌.ಎಚ್‌.ಜಕ್ಕಪ್ಪನವರ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪರಿಷತ್‌ ಸದಸ್ಯರಾಗಿದ್ದ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌, ಪ್ರಕಾಶ್‌ ಕೆ. ರಾಥೋಡ್‌ ಅವರ ಅವಧಿ ಅಕ್ಟೋಬರ್‌ 2024ಕ್ಕೆ, ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ ಅವರ ಅವಧಿ ಜನವರಿ 2025ಕ್ಕೆ ಮುಕ್ತಾಯವಾಗಿತ್ತು. ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲು ಸಿ.ಪಿ. ಯೋಗೇಶ್ವರ್‌ ರಾಜೀನಾಮೆ ನೀಡಿದ್ದರಿಂದ ಅವರ ಸ್ಥಾನವೂ ತೆರವಾಗಿತ್ತು. ಹೀಗಾಗಿ ಖಾಲಿ ಇದ್ದ ಸ್ಥಾನಗಳಿಗೆ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ.

ಈ ಹಿಂದೆ ಜೆಡಿಎಸ್‌ನಲ್ಲಿದ್ದು ವಿಧಾನ ಪರಿಷತ್ ಸದಸ್ಯರಾಗಿದ್ದ ರಮೇಶ್ ಬಾಬು ಅವರು, ಅನಂತರ ಆ ಪಕ್ಷದ ನಾಯಕರ ಧೋರಣೆಯ ವಿರುದ್ದ ಬಂಡಾಯವೆದ್ದು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದು, ಇದೀಗ ಅವರನ್ನು ಪರಿಷತ್‌ಗೆ ನಿರ್ದೇಶನ ಮಾಡಲಾಗಿದೆ.

ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಅವರನ್ನು ಕೂಡ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಕರ್ನಾಟಕದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವರೂ ಆಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಬೇಗಾನೆ ರಾಮಯ್ಯ ಅವರ ಪುತ್ರಿಯಾಗಿರುವ ಡಾ.ಆರತಿ ಅವರು ಕಾಂಗ್ರೆಸ್ ಪಕ್ಷದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಎನ್‌ಆರ್‌ಐ ಸೆಲ್‌ನ ಮೊದಲ ಅಧ್ಯಕ್ಷರಾಗಿದ್ದರು.

ವಾಷಿಂಗ್ಟನ್ DC ಯಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತು ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯದ ಇಂಡಿಯಾ ಡೆವಲಪ್‌ಮೆಂಟ್ ಫೌಂಡೇಶನ್‌ನಲ್ಲಿ ಸಲಹೆಗಾರರಾಗಿದ್ದರು. ಆರತಿಯವರು ಸಾಮಾಜಿಕ ಆರ್ಥಿಕ ಅಗತ್ಯಗಳನ್ನು ಪೂರೈಸಲು ಮತ್ತು ಕರ್ನಾಟಕದ ದೂರದ ಹಳ್ಳಿಗಳಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು 'ಕೃಷ್ಣ ಫೌಂಡೇಶನ್' ಎಂಬ NGO ಅನ್ನು ಪ್ರಾರಂಭಿಸಿ, ಕೆಲಸ ಮಾಡಿದ್ದಾರೆ.

ಡಾ. ಆರತಿ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ 'ರಾಜಕೀಯ ವಿಜ್ಞಾನ' ಮತ್ತು ವಾಷಿಂಗ್ಟನ್‌ನ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದಿಂದ 'ಅಂತರರಾಷ್ಟ್ರೀಯ ವಾಣಿಜ್ಯ ಮತ್ತು ಸಾರ್ವಜನಿಕ' ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಅವರಿಗೆ ಸಂದಿದೆ.

ದೇಶಲ್ಲೇ ಮೊದಲ ಬಾರಿಗೆ ದಲಿತ ಪತ್ರಕರ್ತರೊಬ್ಬರು ವಿಧಾನಪರಿಷತ್ ಸ್ಥಾನ ಪಡೆದಿದ್ದಾರೆ. ಡಾ.ಕೆ.ಶಿವಕುಮಾರ್ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನವರು. ತಂದೆ ಕೃಷ್ಣಪ್ಪ ತಾಯಿ ಈರಮ್ಮ ದಂಪತಿಗಳ ಪುತ್ರ. ಪ್ರಸ್ತುತ ದಿ.ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಹಿರಿಯ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದರು. ನಂತರ ಪಿ.ಎಚ್.ಡಿ.ಪದವಿಯನ್ನು ಪಡೆದಿದ್ದಾರೆ. ಬಳಿಕ ಆಂದೋಲನ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಅವರು ನಂತರ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸೇರಿಕೊಂಡು ಸದ್ಯ ಹಿರಿಯ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಲಿತ ಬಲ ಸಮುದಾಯದ ಎಫ್‌.ಎಚ್‌.ಜಕ್ಕಪ್ಪನವರ್ ಅವರನ್ನು ಪರಿಷತ್‌ಗೆ ನಿರ್ದೇಶನ ಮಾಡಲಾಗಿದೆ. ಇವರು ಟ್ರೇಡ್ ಯೂನಿಯನ್ ಅಧ್ಯಕ್ಷ, ಕಾಂಗ್ರೆಸ್ ದಲಿತ ಘಟಕದ ರಾಜ್ಯಾಧ್ಯಕ್ಷರಾಗಿದ್ದವರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions