Advertisement

ಅ. 2 - ಉಚ್ಚಿಲ ದಸಾರ | ಭವ್ಯ ಶೋಭಾಯಾತ್ರೆಗೆ ಸಕಲ ಸಿದ್ಧತೆ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಪ್ರವರ್ತಿತ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸಾರ ಪ್ರಯುಕ್ತ ಅ. 2ರ ವಿಜಯ ದಶಮಿಯಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯುವ ಭವ್ಯ ಶೋಭಾಯಾತ್ರೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಶೋಭಾಯಾತ್ರೆ ಸುವ್ಯವಸ್ಥಿತವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಉಚ್ಚಿಲ ದಸರಾ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್, ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಉಪಸ್ಥಿತಿಯಲ್ಲಿ ಸಭೆ ನಡೆಸಿದೆ.

ಅಂದು ಮಧ್ಯಾಹ್ನ 12ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕ್ಷೇತ್ರದಿಂದ ಸಂಜೆ 4.30ಕ್ಕೆ ಶೋಭಾಯಾತ್ರೆ ಹೊರಟು ಎರ್ಮಾಳ್ ತನಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ, ಅಲ್ಲಿಂದ ತಿರುಗಿ ಹೆದ್ದಾರಿ ಮೂಲಕ ಉಚ್ಚಿಲ– ಮೂಳೂರು, ಕೊಪ್ಪಲಂಗಡಿವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ದೇವರ ವಿಗ್ರಹದ ಜಲಸ್ತಂಭನ ನಡೆಯಲಿದೆ.

ಈ ಸಂದರ್ಭ ಕಾಪು ಬೀಚ್‌ನಲ್ಲಿ ಗಂಗಾರತಿ, ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ, ನವದುರ್ಗೆಯರು, ಶಾರದಾ ಮಾತೆ, ಅಂಬಾರಿ ಹೊತ್ತ ಆನೆಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ನೂರಾರು ಮಹಿಳೆಯ‌ರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಅರ್ಚಕರಿಂದ ಕಾಶಿ ಗಂಗಾ ನದಿ ತೀರದಲ್ಲಿ ನಡೆಯುವ ರೀತಿಯಲ್ಲಿ ನವದುರ್ಗೆಯರು, ಶಾರದಾ ಮಾತೆ, ಸಮುದ್ರರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಜಿ. ಶಂಕರ್ ತಿಳಿಸಿದ್ದಾರೆ.

ನವರಾತ್ರಿಯ ಒಂಬತ್ತನೇ ದಿನವಾದ ಮಂಗಳವಾರ ಮಾತೆ ಸಿದ್ಧಿಧಾತ್ರಿ ಆರಾಧನೆ, ವಿವಿಧ ಧಾರ್ಮಿಕ ವಿಧಿವಿಧಾನ, ಭಜನಾ ಸಂಕೀರ್ತನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆದವು. ಶೃತಿ ಮ್ಯೂಸಿಕಲ್ ಚಂದ್ರಕಾಂತ್ ಸುವರ್ಣ ಮತ್ತು ಬಳಗದಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ವಿದುಷಿ ರೇಖಾ ಸುಬ್ರಹ್ಮಣ್ಯ ಶಿವಮೊಗ್ಗ ಅವರಿಂದ ವೀಣಾ ವಾದನ ಕಾರ್ಯಕ್ರಮ, ವಿದುಷಿ ಪಾವನಾ ನಿರ್ದೇಶನದ ಶಾರದಾ ನೃತ್ಯಾಲಯ ಮಾರ್ಪಳ್ಳಿ ತಂಡದಿಂದ ನೃತ್ಯ ವೈವಿಧ್ಯ, ಮಂಗಳೂರು ಚಿಲಿಂಬಿಯ ಸಾಯಿಶಕ್ತಿ ಕಲಾಬಳಗದಿಂದ ‘ಜೋಡು ಜೀಟಿಗೆ’ ತುಳು ಜನಪದ ನಾಟಕ ಪ್ರದರ್ಶನ ನಡೆಯಿತು.‌

ಇಂದಿನ ಕಾರ್ಯಕ್ರಮ: ನವರಾತ್ರಿಯ 10ನೇ ದಿನವಾದ ಬುಧವಾರ ಬೆಳಿಗ್ಗೆ ಉದಯಪೂಜೆ, ನಿತ್ಯಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಕಲ್ಪೋಕ್ತ ಪೂಜೆ ನಡೆಯಲಿದೆ. ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ಬೆಳಗ್ಗೆ ಭಜನಾ ಸಂಕೀರ್ತನೆ, ಮಧ್ಯಾಹ್ನ ಪ್ರಭಾಕರ ತಣ್ಣೀರುಬಾವಿ ತಂಡದಿಂದ ಭಕ್ತಿ ಗೀತಾಂಜಲಿ, ಅಕ್ಷತಾ ದೇವಾಡಿಗ ಅವರಿಂದ ಸಾಕ್ಸೊಫೋನ್ ವಾದನ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಿಯಾಲಿಟಿ ಶೋ ಖ್ಯಾತಿಯ ಯುವ ಗಾಯಕ– ಗಾಯಕಿಯರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions