ಜೀವಂತ ಇರುವಾಗಲೇ ತನ್ನ ಸಮಾಧಿಯನ್ನು ತಾನೇ ನಿರ್ಮಿಸಿಕೊಂಡಿದ್ದ ತೆಲಂಗಾಣದ ನಕ್ಕಾ ಇಂದ್ರಯ್ಯ (80 ವರ್ಷ) ಅವರು ಭಾನುವಾರ (ಜನವರಿ 11) ನಿಧನರಾಗಿದ್ದಾರೆ.
ಇಂದ್ರಯ್ಯ ಅವರು, ಜಿಲ್ಲೆಯ ಲಕ್ಷ್ಮೀಪುರಂ ಗ್ರಾಮದಲ್ಲಿ ತಮ್ಮ ಪತ್ನಿಯ ಸಮಾಧಿಯ ಪಕ್ಕದಲ್ಲಿಯೇ ತಮ್ಮ ಸಮಾಧಿಯ ನಿರ್ಮಿಸಿಕೊಂಡು ದೇಶದ ಗಮನ ಸೆಳೆದಿದ್ದರು. ಸಮಾಧಿ ಪಕ್ಕದಲ್ಲಿ ಜೀವನ ಮತ್ತು ಮರಣದ ಕಹಿ ಸತ್ಯದ ಕುರಿತ ಸಂದೇಶವಿರುವ ಫಲಕವನ್ನು ಹಾಕಿದ್ದರು. ಅದರಲ್ಲಿ ‘ಮರಣ ಅನಿವಾರ್ಯ. ಸತ್ತ ನಂತರ ಯಾರೂ ಸಂಪತ್ತನ್ನು ಕೊಂಡೊಯ್ಯುವುದಿಲ್ಲ’ ಎಂದು ಬರೆಯಲಾಗಿದೆ. ಪ್ರತಿನಿತ್ಯ ಸಮಾಧಿ ಇರುವ ಸ್ಥಳವನ್ನು ಸ್ವಚ್ಛಗೊಳಿಸುವುದು, ಗಿಡಗಳಿಗೆ ನೀರುಣಿಸುವುದು ಹಾಗೇ ಅಲ್ಲಿಯೇ ಕೆಲ ಕಾಲ ಕುಳಿತು ಸಮಯ ಕಳೆಯುವುದು ಅವರ ದಿನಚರಿಯಾಗಿತ್ತು.
ಇಂದ್ರಯ್ಯ ಅವರ ಹಿರಿಯ ಸಹೋದರ ನಕ್ಕಾ ಭೂಮಯ್ಯ ಮಾತನಾಡಿ, 'ಅವರು ಬದುಕಿರುವಾಗಲೇ ತಮ್ಮ ಸಮಾಧಿಯ ನಿರ್ಮಿಸಿಕೊಂಡಿದ್ದರು. ತಮ್ಮ ಹಳ್ಳಿಗಾಗಿ ಹಲವು ಉತ್ತಮ ಕೆಲಸಗಳನ್ನೂ ಮಾಡಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಗಳಿಸಿದ್ದ ಸಂಪತ್ತನ್ನು ತಮ್ಮ ನಾಲ್ವರು ಮಕ್ಕಳಿಗೆ ಸಮಾನವಾಗಿ ಹಂಚಿದ್ದಾರೆ. ಅವರಿಗಾಗಿ ಮನೆಗಳನ್ನೂ ನಿರ್ಮಿಸಿದ್ದಾರೆ. ಜತೆಗೆ ಗ್ರಾಮದಲ್ಲಿ ಚರ್ಚ್ ಕೂಡ ನಿರ್ಮಿಸಿದ್ದಾರೆ ಎಂದು ಹೇಳಿದ್ದಾರೆ. ಇಂದ್ರಯ್ಯ ಅವರ ಕೊನೆಯ ಆಸೆಯಂತೆ, ಅವರೇ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು.
‘ನಾನು ನಾಲ್ಕೈದು ಮನೆಗಳು, ಒಂದು ಶಾಲೆ, ಒಂದು ಚರ್ಚ್ ಕಟ್ಟಿದ್ದೇನೆ. ಈಗ ನನ್ನ ಸಮಾಧಿಯನ್ನೂ ನಿರ್ಮಿಸಿದ್ದೇನೆ. ಸಮಾಧಿಯ ನಿರ್ಮಾಣ ಹಲವರಿಗೆ ನೋವುಂಟು ಮಾಡಬಹುದು, ಆದರೆ ನನಗೆ ಸಂತೋಷವನ್ನು ನೀಡಿದೆ. ನನ್ನ ಮರಣದ ನಂತರ ಮಕ್ಕಳಿಗೆ ತೊಂದರೆ ಕೊಡಬಾರದೆಂದು ನಾನೇ ನಿರ್ಮಿಸಿದ್ದೇನೆ’ ಎಂದು ಅವರು ಹಿಂದೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions