ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಕುರ್ಕಾಲು ಗ್ರಾಮದ ಶಂಕರಪುರದಲ್ಲಿ ಇಂದು ಬೆಳಿಗ್ಗೆ ನಡೆದ ಸರ ಕಳವು ಪ್ರಕರಣವನ್ನು ಶಿರ್ವ ಪೊಲೀಸರು ಚುರುಕಿನ ಕಾರ್ಯಾಚರಣೆಯಲ್ಲಿ ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಾಗಿದ್ದಾರೆ.
ಘಟನೆಯ ಹಿನ್ನಲೆ : ಇಂದು ಫೆ.21 ರಂದು ಬೆಳಿಗ್ಗೆ ಸುಮಾರು 9:30ರ ವೇಳೆಗೆ ಹೆಲೆನ್ ಡಿಸೋಜರವರು ತಮ್ಮ ಮನೆಯ ಹಿಂಭಾಗದಲ್ಲಿ ಗೀತಾರವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ವೇಳೆ ಈ ಹಿಂದೆ ಬಾಡಿಗೆಗೆ ವಾಸವಾಗಿದ್ದ ಆನಂದ ಹಾಗೂ ಇನ್ನಿಬ್ಬರು ಮನೆ ಬಾಡಿಗೆ ವಿಚಾರಿಸಲು ಬಂದಿದ್ದಾರೆ. ಅವರು ಮಾತನಾಡುತ್ತಾ ಚಹ ಕುಡಿದು, ರೂಮ್ ಇಲ್ಲವೆಂದು ತಿಳಿಸಿದ ಬಳಿಕ ಪಿರ್ಯಾದಿದಾರರ ಪಕ್ಕದ ಮನೆಯ ಅಕ್ಕ ತೆರಜಾರವರ ಮನೆ ಕಡೆಗೆ ತೆರಳಿದ್ದಾರೆ.
ಸುಮಾರು 9:45ರ ವೇಳೆಗೆ ಅವರ ಪೈಕಿ ಒಬ್ಬ ವ್ಯಕ್ತಿ ಪುನಃ ಬಂದು “ಬಾಡಿಗೆ ರೂಮ್ ಬೇಕಾದರೆ ಕರೆ ಮಾಡುತ್ತೇನೆ” ಎಂದು ಹೇಳಿ ಮೊಬೈಲ್ ನಂಬರ್ ಕೇಳಿದ್ದಾನೆ. ನಂಬರ್ ಹೇಳುವ ವೇಳೆ ಆರೋಪಿಯು ಏಕಾಏಕಿ ಕುತ್ತಿಗೆಗೆ ಕೈ ಹಾಕಿ, ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಕಸಿದುಕೊಂಡಿದ್ದಾನೆ. ತಡೆಯಲು ಬಂದ ಹೆಲೆನ್ ಡಿಸೋಜರವರು ಅಕ್ಕ ತೆರಜಾರವರನ್ನು ದೂಡಿ ಹಾಕಿ ಮೂವರು ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಕಳುವಾದ ಚಿನ್ನದ ಸರದ ಅಂದಾಜು ಮೌಲ್ಯ ₹3.50 ಲಕ್ಷ ಎಂದು ತಿಳಿದುಬಂದಿದೆ.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಪತ್ತೆಗಾಗಿ ತಕ್ಷಣ ಕಾರ್ಯಪ್ರವೃತ್ತರಾದ ಶಿರ್ವ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದರಲ್ಲಿ ಪಲ್ಸರ್ ಬೈಕ್‌ನಲ್ಲಿ ಮೂವರು ಆರೋಪಿಗಳು ಬಂದು ಕೃತ್ಯ ಎಸಗಿರುವುದು ಪತ್ತೆಯಾಯಿತು. ತಕ್ಷಣ ಜಿಲ್ಲಾ ನಿಯಂತ್ರಣ ಕೊಠಡಿ ಮೂಲಕ ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ನೀಡಲಾಗಿದ್ದು, ನಾಕಾಬಂದಿ ನಡೆಸಲಾಯಿತು.
ಕೃತ್ಯ ನಡೆದ ಮೂರರಿಂದ ನಾಲ್ಕು ಗಂಟೆಯೊಳಗಾಗಿ ಶಿರೂರು ಚೆಕ್‌ಪೋಸ್ಟ್‌ನಲ್ಲಿ ಬೈಂದೂರು ಪೊಲೀಸರು ಅನುಮಾನಾಸ್ಪದ ಬೈಕ್ ತಡೆದು ಪರಿಶೀಲಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ಶಿರ್ವ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿರ್ವ ಪೊಲೀಸರು ಆರೋಪಿಗಳಿಂದ ಒಂದು ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ಸಿಪಿಐ ಕಾಪು ಅಜ್ಮತ್ ಅಲಿ ನೇತೃತ್ವದ ತಂಡದೊಂದಿಗೆ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಪಿಎಸ್ಐ ಸುನಿಲ್ ಕುಮಾರ್, ದಯಾನಂದ ಪ್ರಭು, ಅನ್ವರ್ ಅಲಿ, ಹರೀಶ, ಯಲಾಲ್ಲಿಂಗ ಸುರೇಶ್ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions