Advertisement

4ನೇ ವರ್ಷದ ವೈಭವದ ಉಚ್ಚಿಲ ದಸರಾ ಶೋಭಾಯಾತ್ರೆ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿರುವ, ಕರಾವಳಿಯಾದ್ಯಂತ ಭಕ್ತ ಜನರನ್ನು ಸೂಜಿಗಲ್ಲಿನಂತೆ ಸೆಳೆದ ನಾಲ್ಕನೇ ವರ್ಷದ ಉಡುಪಿ ಉಚ್ಚಿಲ ದಸರಾ 2025 ರ ಬೃಹತ್‌ ಶೋಭಾಯಾತ್ರೆಯು ಗುರುವಾರ ಸಂಜೆ ಅತ್ಯಂತ ವೈಭವದಿಂದ ನಡೆಯಿತು.

ನಾಡೋಜ ಡಾ. ಶಂಕರ್‌ಅವರ ಸಾರಥ್ಯದಲ್ಲಿ ನಡೆದ ಉಚ್ಚಿಲ ದಸರಾದ ವೈಭವದ ಶೋಭಾಯಾತ್ರೆಯು ಸಂಜೆ ಆರಂಭಗೊಂಡು ಮಧ್ಯರಾತ್ರಿವರೆಗೂ ಉಚ್ಚಿಲ, ಎರ್ಮಾಳು ಮತ್ತು ಕಾಪು ಭಾಗದಲ್ಲಿ ಅತ್ಯಾಕರ್ಷಕವಾಗಿ ನಡೆದು ಜನರನ್ನು ಭಕ್ತಿಪರವಶಗೊಳಿಸಿತು.

ಶಾರದೆ ಮತ್ತು ನವದುರ್ಗೆಯರ ಮೂರ್ತಿಗಳ ಸಹಿತವಾಗಿ ಮೆರವಣಿಗೆಯು ಮಹಾಲಕ್ಷ್ಮೀ ದೇವಾಲಯದಿಂದ ಹೊರಟು ಎರ್ಮಾಳ್‌ವರೆಗೆ ಸಾಗಿ ಅಲ್ಲಿಂದ ಕಾಪುವಿಗೆ ತೆರಳಿ ಬಳಿಕ ಕಡಲ ತೀರಕ್ಕೆ ತೆರಳಿ ಅಲ್ಲಿ ಸಮುದ್ರ ಮಧ್ಯೆ ಜಲಸ್ತಂಭನ ನಡೆಸಲಾಯಿತು. ಶೋಭಾಯಾತ್ರೆಯಲ್ಲಿ 60ಕ್ಕೂ ಅಧಿಕ ಸ್ತಬ್ಧಚಿತ್ರಗಳು, ಕುಣಿತ ಭಜನಾ, ನಾಸಿಕ್‌ ಬ್ಯಾಂಡ್‌, ಆಕರ್ಷಕ ವೇಷಗಳು ಭಕ್ತರನ್ನು ಮಂತ್ರಮುಗ್ಧಗೊಳಿಸಿದವು.

ವೈವಿಧ್ಯಮಯ ಸ್ತಬ್ಧಚಿತ್ರ, ವೇಷಗಳು

ಬೇಡರ ನೃತ್ಯ, ಬೃಹತ್‌ ಆಂಜನೇಯ, ಶಿರಡಿ ಸಾಯಿಬಾಬಾ, ಮಹಾಲಕ್ಷ್ಮೀ, ಸಾಹುಕಾರ, ಕುಲಗುರು, ಯಾಂತ್ರಿಕ ಆನೆ, ಭಜನೆ, ರಾವಣಾಸುರ, ರಂಭೆ ಊರ್ವಶಿ ಮೇನಕೆ, ದಶಾವತಾರ, ಲಂಕೆಗೆ ತೆರಳುವ ಹನುಮಂತ, ರಕ್ಕಸ ವೇಷಗಳು, ಶಬರಿಮಲೆ ಯಾತ್ರೆ, ಮಹಿಷವಧೆ, ಮತ್ಸಾವತಾರ, ಶಂಖಾಸುರ, ಬೃಹತ್‌ ಆಮೆಯ ಸ್ತಬ್ಧ ಚಿತ್ರಗಳು ಎಲ್ಲರನ್ನೂ ರಂಜಿಸಿದವು.

ಅಯೋಧ್ಯೆಯ ರಾಮಮಂದಿರ, ಆಪರೇಷನ್‌ ಸಿಂಧೂರದ ಮೂಲಕ ಸಮಕಾಲೀನ ವಿಚಾರಗಳಿಗೆ ಸ್ಪಂದಿಸಿದ ಶೋಭಾಯಾತ್ರೆಯು ಹುಲಿ ವೇಷ,ಶಾರದೆ, ದೋಣಿ, ಚೆಂಡೆ, ಕುಣಿತ ಭಜನೆ, ಕೇರಳ ಚೆಂಡೆ, ಮೀನು, ಕೋಳಿ, ಹಾಸ್ಯಗಾರ ವೇಷಗಳು, ಕೊಂಬು, ಕೊಡೆ, ತಾಲೀಮು, ಡೋಲುಗಳೊಂದಿಗೆ ವಿಜೃಂಭಿಸಿತು. 25ಕ್ಕೂ ಅಧಿಕ ಭಜನಾ ತಂಡಗಳು, ಸಾವಿರಾರು ಮಂದಿ ಭಜಕರು ಕಾಲ್ನಡಿಗೆಯ ಮೂಲಕ ಭಾಗವಹಿಸಿದರು.

ಶೋಭಾಯಾತ್ರೆ ಸಾರಥಿಗಳು

ನಾಡೋಜ ಡಾ| ಶಂಕರ್‌, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮಾರ್ಗದರ್ಶನದಲ್ಲಿ ದಸರಾ ಸಮಿತಿ ಅಧ್ಯಕ್ಷ ವಿನಯ್‌ ಕರ್ಕೇರ, ಶೋಭಾಯಾತ್ರೆ ಸಮಿತಿಯ ಶರಣ್‌ ಮಟ್ಟು, ರವೀಂದ್ರ ಶ್ರೀಯಾನ್‌, ಹರಿಯಪ್ಪ ಕೋಟ್ಯಾನ್‌, ಜಯಂತ್‌ ಅಮೀನ್‌ ಕೋಡಿ, ಗುಂಡು ಬಿ. ಅಮೀನ್‌, ಸರ್ವೋತ್ತಮ ಕುಂದರ್‌, ಗೌತಮ್‌ ಕೋಡಿಕಲ್‌, ರಾಜೇಂದ್ರ ಹಿರಿಯಡಕ, ಮಂಜುನಾಥ ಸುವರ್ಣ, ಸಮಸ್ತ ಮೊಗವೀರ ಸಂಘಟನೆಗಳ ಸಹಕಾರ ದೊಂದಿಗೆ ಶೋಭಾಯಾತ್ರೆ ನಡೆಯಿತು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions