Advertisement

ಕರಾವಳಿ ಜಿಲ್ಲೆಗಳ ಕಡಲು ಕೊರೆತ ತಡೆಗೆ 300 ಕೋಟಿ ರೂ. ಯೋಜನೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ

ರಾಜ್ಯ ಕರಾವಳಿಯ ಪ್ರಮುಖ ಸಮಸ್ಯೆಯಾಗಿರುವ ಕಡಲು ಕೊರತದ ಕುರಿತಂತೆ ಮುಖ್ಯಮಂತ್ರಿಗಳ ಸೂಚನೆಯಂತೆ ತಜ್ಞರ ತಂಡದಿಂದ ವೈಜ್ಞಾನಿಕ ಅಧ್ಯಯನ ನಡೆಸಿ 300 ಕೋಟಿ ರೂ.ಗಳ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಬುಧವಾರ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ ಸಚಿವರು ಕಾಪು ತಾಲೂಕು ಮೂಳೂರು ಗ್ರಾಮದ ತೊಟ್ಟಂನಲ್ಲಿ ಕಡಲು ಕೊರೆತದಿಂದ ಹಾನಿಗೊಂಡ ಪ್ರದೇಶಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಕಳೆದ 20-30 ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ನಿರಂತರ ಸಮಸ್ಯೆಗೆ ಕಾರಣವಾಗುತ್ತಿರುವ ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮದರಾಸು ಐಐಟಿ ತಜ್ಞರು ಈಗಾಗಲೇ ವರದಿಯನ್ನು ಸಲ್ಲಿಸಿದ್ದು, ಅದರಂತೆ ಪ್ರತಿ 100ಮೀ.ಗೆ ತಡೆಗೋಡೆ ನಿರ್ಮಾಣಕ್ಕೆ 15 ಕೋಟಿ ಖರ್ಚು ಬರುತ್ತದೆ. ಅದೇ ಕಡಲಿಗೆ ಕಲ್ಲು ಹಾಕಲು ಪ್ರತಿ 100ಮೀ.ಗೆ 1.5ಕೋಟಿ ರೂ ಖರ್ಚಾಗುತ್ತದೆ. ಹೀಗಾಗಿ ಈ ವಿಷಯದ ಕುರಿತು ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಮುಖ್ಯಮಂತ್ರಿಗಳ ಸೂಚನೆಯಂತೆ ಕರಾವಳಿಯ ಮೂರು ಜಿಲ್ಲೆಗಳಿಗೆ ತಲಾ ನೂರು ಕೋಟಿಯಂತೆ ಒಟ್ಟು 300 ಕೋಟಿ ರೂಗಳಿಗೆ ಪ್ರಸ್ತಾಪ ಸಲ್ಲಿಸುವಂತೆ ಮೂರು ಜಿಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾ ಗಿದೆ. ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಕೊರೆತ ಕಾಣಿಸಿಕೊಳ್ಳುವ ಪ್ರದೇಶಗಳು ಹಾಗೂ ಹಿಂದೆ ಹಾಕಿರುವ ತಡೆ ಅಳಿದಿರುವ ಪ್ರದೇಶಗಳನ್ನು ಪ್ರಸ್ತಾವನೆಯಲ್ಲಿ ಸೇರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾ ಗಿದೆ ಎಂದರು.

ಭೂ ಕುಸಿತಕ್ಕೆ ತಡೆಗೋಡೆ: ಅಲ್ಲದೇ ಮಳೆಗಾಲದಲ್ಲಿ ಭೂ ಕುಸಿತ ಕಂಡುಬರುವ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಲ್ಲಿ ಸಮಸ್ಯೆ ಪರಿಹಾರಕ್ಕೆ 500 ಕೋಟಿ ರೂ. ಯೋಜನೆ ರೂಪಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಭೂ ಕುಸಿತದ ತಡೆಗೆ ಗಂಭೀರ ಪ್ರಯತ್ನ ಅಗತ್ಯ ಎಂದ ಅವರು, ಇದರಲ್ಲಿ ತಡೆಗೋಡೆಯಂಥ ಶಾಶ್ವತ ಪರಿಹಾರ ರೂಪಿಸಲು ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

ಇದಕ್ಕಾಗಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧ್ಯಯನ ನಡೆಸಿ ನೀಡಿದ ವರದಿಯನ್ನು ಆಧಾರ ವಾಗಿರಿಸಿ ಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದ ಅವರು, ಉಡುಪಿ ಜಿಲ್ಲೆಗೆ 50ಕೋಟಿ ರೂ.ಗೆ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಲಾಗಿದೆ ಎಂದರು.

ಈ ಮೂಲಕ ಉಡುಪಿ ಜಿಲ್ಲೆಗೆ ಕಡಲು ಕೊರೆತಕ್ಕೆ 100ಕೋಟಿ ರೂ ಹಾಗೂ ಭೂ ಕುಸಿತಕ್ಕೆ 50 ಕೋಟಿ ರೂ. ಸೇರಿದಂತೆ ಒಟ್ಟು 150 ಕೋಟಿ ರೂ.ಗಳಿಗೆ ಶೀಘ್ರವೇ ಪ್ರಸ್ತಾವನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.

ರಾಜ್ಯದಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರದ ಕೊರತೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ, ಕೇಂದ್ರ ಸರಕಾರ ನಮ್ಮ ಬೇಡಿಕೆಯ ಗೊಬ್ಬರ ನೀಡದೇ ಶೇ.20ರಷ್ಟು ಕಡಿಮೆ ನೀಡಿ ರುವುದರಿಂದ ಈ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ, ರಾಜ್ಯದ ಸಚಿವರಿಗೆ ಪತ್ರ ಬರೆದು ವಿವರಿಸಿ, ಮನವಿ ಮಾಡಿದ್ದರೂ ಈವರೆಗೆ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದರು.

ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾಗಿರುವ ಶೇ.20ರಷ್ಟು ರಸಗೊಬ್ಬರ ನೀಡಿದರೆ ರಾಜ್ಯದ ಈ ಸಮಸ್ಯೆ ಬಗೆಹರಿಯುತ್ತದೆ ಎಂದ ಸಚಿವರು, ಉಡುಪಿ ಜಿಲ್ಲೆಯಲ್ಲಿ ಇಂಥ ಯಾವುದೇ ಸಮಸ್ಯೆ ಇಲ್ಲ ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಎಸಿ ರಶ್ಮಿ, ಕಾಪು ತಹಶೀಲ್ದಾರ್ ಪ್ರತಿಭಾ, ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಅಲ್ಲದೇ ವಿನಯ ಕುಮಾರ ಸೊರಕೆ, ಅಶೋಕ್ ಕುಮಾರ್ ಕೊಡವೂರು, ಎಂ.ಎ.ಗಫೂರ್ ಸೇರಿದಂತೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions